ADVERTISEMENT

ಶಾಲೆ, ಅಂಗನವಾಡಿಗೆ ಸ್ವಂತ ಸೂರಿಲ್ಲ: ಕಿರಿದಾದ ಕೋಣೆಯಲ್ಲಿ ಕೇಂದ್ರ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 5:25 IST
Last Updated 12 ಫೆಬ್ರುವರಿ 2025, 5:25 IST
ತುಮಕೂರಿನ ಪಿ.ಎಚ್‌.ಕಾಲೊನಿಯಲ್ಲಿರುವ ಅಂಗನವಾಡಿ ಕೇಂದ್ರ
ತುಮಕೂರಿನ ಪಿ.ಎಚ್‌.ಕಾಲೊನಿಯಲ್ಲಿರುವ ಅಂಗನವಾಡಿ ಕೇಂದ್ರ   

ತುಮಕೂರು: ಸುಮಾರು 15 ಸಾವಿರ ಮತದಾರರು ಇರುವ, ನಗರದಲ್ಲಿ ಹೆಚ್ಚಿನ ಜನ ವಾಸಿಸುವ ಪ್ರದೇಶ ಎಂದೇ ಕರೆಸಿಕೊಳ್ಳುವ ಮಹಾನಗರ ಪಾಲಿಕೆಯ 10ನೇ ವಾರ್ಡ್‌ನಲ್ಲೇ ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆಗೆ ಸ್ವಂತ ಸೂರಿಲ್ಲ. ಇದು ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಪಿ.ಎಚ್‌.ಕಾಲೊನಿಯ ಅಂಗನವಾಡಿ ಕೇಂದ್ರಕ್ಕೆ 12 ಮಕ್ಕಳು ದಾಖಲಾಗಿದ್ದಾರೆ. ಆದರೆ, ಸ್ವಂತ ಕಟ್ಟಡದ ಸೌಲಭ್ಯ ಕಲ್ಪಿಸಿ, ಕಲಿಕೆಗೆ ಉತ್ತೇಜನ ನೀಡಿಲ್ಲ. ನಗರ ಪ್ರದೇಶದಲ್ಲಿನ ಅಂಗನವಾಡಿಗಳ ಸ್ಥಿತಿಯೇ ಹೇಳತೀರದಾಗಿದೆ. ಗೂಡಂಗಡಿಯಂತೆ ಇರುವ ಕೋಣೆಯಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಆಟೋಟಕ್ಕೆ ಸೂಕ್ತವಾದ ಜಾಗವೇ ಇಲ್ಲವಾಗಿದೆ.

ಸರ್ಕಾರಿ ಉರ್ದು ಶಾಲೆಯ ಪರಿಸ್ಥಿತಿಯೂ ಹೀಗೆ ಇದೆ. ಅಂಗನವಾಡಿಗೂ ಶಾಲೆಗೂ ಹೆಚ್ಚಿನ ವ್ಯತ್ಯಾಸ ಇಲ್ಲ. 1ರಿಂದ 5ನೇ ತರಗತಿ ವರೆಗೆ 35 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಆಟದ ಮೈದಾನ, ಶೌಚಾಲಯ, ಪ್ರತ್ಯೇಕ ಊಟದ ಸಭಾಂಗಣ ಸೇರಿದಂತೆ ಕನಿಷ್ಠ ಸೌಲಭ್ಯಗಳಿಲ್ಲ. ಪೋಷಕರು ಭಯದಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

‘ಜನಪ್ರತಿನಿಧಿಗಳು, ಅಧಿಕಾರಿಗಳು ಉರ್ದು ಶಾಲೆ, ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಆಸಕ್ತಿ ತೋರುತ್ತಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಸ್ವಂತ ಕಟ್ಟಡ ನಿರ್ಮಿಸಿಲ್ಲ. ಮಕ್ಕಳು ಪ್ರಾರಂಭದಲ್ಲೇ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದು ಇಂತಿಯಾಜ್‌ ಬೇಸರ ವ್ಯಕ್ತಪಡಿಸಿದರು.

ಮಿತಿ ಮೀರಿದ ವ್ಹೀಲಿಂಗ್‌: ಪಿ.ಎಚ್‌.ಕಾಲೊನಿಯ 6ನೇ ಅಡ್ಡರಸ್ತೆಯಿಂದ 16ನೇ ಅಡ್ಡರಸ್ತೆ, ಲೇಬರ್‌ ಕಾಲೊನಿ, ಮರಾಠಿ ಬೀದಿ ಸುತ್ತಮುತ್ತಲಿನ ಪ್ರದೇಶಗಳು 10ನೇ ವಾರ್ಡ್‌ ವ್ಯಾಪ್ತಿಗೆ ಒಳಪಡುತ್ತವೆ. ಬಹುತೇಕ ರಸ್ತೆಗಳಲ್ಲಿ ಹಂಪ್ಸ್‌ ಹಾಕಿಸಿಲ್ಲ. ಈ ರಸ್ತೆಗಳು ವ್ಹೀಲಿಂಗ್‌ ಮಾಡುವವರನ್ನು ಕೈಬೀಸಿ ಕರೆಯುತ್ತಿವೆ.

‘ಸಂಜೆ ಶಾಲಾ–ಕಾಲೇಜು ಬಿಡುವುದೇ ತಡ ಬೈಕ್‌ ಸದ್ದು ಜಾಸ್ತಿಯಾಗುತ್ತದೆ. ಮನೆಯಿಂದ ಆಚೆ ಬರಲು ಮಕ್ಕಳು ಹೆದರುತ್ತಿದ್ದಾರೆ. ರಾತ್ರಿ ಹೊತ್ತು ನಿದ್ದೆ ಮಾಡಲು ಆಗುತ್ತಿಲ್ಲ. ಮಧ್ಯರಾತ್ರಿ 12 ಗಂಟೆಯ ವರೆಗೆ ಜೋರಾಗಿ ಕೂಗಾಡುತ್ತಾ, ಬೈಕ್‌ ಓಡಿಸುತ್ತಾರೆ. ಕೆಲವೊಮ್ಮೆ ಬೆಳಗಿನ ಜಾವದ ತನಕ ಗಲಾಟೆಗಳು ನಡೆಯುತ್ತವೆ. ಪುಂಡರ ಸಂಖ್ಯೆ ಹೆಚ್ಚಾಗಿದೆ. ಹತ್ತಿರದಲ್ಲಿ ಪೊಲೀಸ್‌ ಠಾಣೆ ಇಲ್ಲ. ಪೊಲೀಸರು ಇತ್ತ ಗಸ್ತು ಬರಲ್ಲ. ಇದರಿಂದ ಗಲಾಟೆಗಳು ಹೆಚ್ಚಾಗುತ್ತಿವೆ’ ಎಂದು ಲೇಬರ್‌ ಕಾಲೊನಿಯ ಮಹ್ಮದ್‌ ಯೂಸಫ್‌ ಅಸಮಾಧಾನ ವ್ಯಕ್ತಪಡಿಸಿದರು.

ಮನೆಗೆ ನೀರು: ರಸ್ತೆಗಳು ತುಂಬಾ ಕಿರಿದಾಗಿದ್ದು, ಎರಡೂ ಬದಿಗಳಲ್ಲಿ ಒತ್ತುವರಿಯಾಗಿದೆ. ಚರಂಡಿ ಸಮರ್ಪಕವಾಗಿ ಇಲ್ಲದೆ ಮಳೆ ಬಂದ ಪ್ರತಿ ಸಾರಿ ಜನರಿಗೆ ತೊಂದರೆಯಾಗುತ್ತಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ. ಮಳೆಗಾಲದಲ್ಲಿ ವಾರ್ಡ್‌ ಜನರ ಪಾಡು ಹೇಳತೀರದಾಗಿರುತ್ತದೆ. ಕಸದ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಕಸ ಸುರಿದು ಬೆಂಕಿ ಹಚ್ಚುತ್ತಿದ್ದಾರೆ.

ಖಾಲಿ ಜಾಗ, ಪಾರ್ಕ್‌ ಪಕ್ಕ ಕಸದ ರಾಶಿ ಬಿದ್ದಿದೆ. ಈ ಭಾಗಕ್ಕೆ ಕಸ ಸಂಗ್ರಹ ವಾಹನಗಳು ಕಾಲ ಕಾಲಕ್ಕೆ ತೆರಳುತ್ತಿಲ್ಲ. ಮಹಾನಗರ ಪಾಲಿಕೆಯ ಈ ಹಿಂದಿನ ಸದಸ್ಯರು ವಾರ್ಡ್‌ಗೆ ಒಂದು ಟ್ರ್ಯಾಕ್ಟರ್‌, ಕಸದ ವಾಹನ ಒದಗಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಇದುವರೆಗೆ ಇದು ಸಾಧ್ಯವಾಗಿಲ್ಲ.

ಅಭಿವೃದ್ಧಿ ಆಗಿದ್ದೇನು?

* ಆರು ಕೊಳವೆ ಬಾವಿ ಕೊರೆಸಿದ್ದು, ನಾಲ್ಕರಲ್ಲಿ ನೀರು ಬಂದಿದೆ

* ರಸ್ತೆ, ಅಡ್ಡರಸ್ತೆ ಒತ್ತುವರಿ ತೆರವು

* ಸರ್ಕಾರಿ ಜಾಗ ರಕ್ಷಣೆ

* ಬೀದಿ ದೀಪ ಅಳವಡಿಕೆ

* 75ಕ್ಕೂ ಹೆಚ್ಚು ವಿದ್ಯುತ್‌ ಕಂಬ ಅಳವಡಿಕೆ

ಸಮಸ್ಯೆ ಏನೇನು?

* ಬ್ರಾಹ್ಮಣ ಹಾಸ್ಟೆಲ್‌ ರಸ್ತೆ ಹಾಳು

* ಕಸದ ಆಟೊ, ಟ್ರ್ಯಾಕ್ಟರ್‌ ಸಮಸ್ಯೆ

* ಸಮರ್ಪಕವಾಗಿ ನಡೆಯದ ಕಸ ಸಂಗ್ರಹ

ಕಿರಿದಾದ ರಸ್ತೆ ಪಿ.ಎಚ್‌.ಕಾಲೊನಿ ಲೇಬರ್‌ ಕಾಲೊನಿ ರಸ್ತೆಗಳು ಕಿರಿದಾಗಿವೆ. ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತದೆ. ಜನರ ಕಷ್ಟಕ್ಕೆ ಮಹಾನಗರ ಪಾಲಿಕೆ ಸದಸ್ಯರು ಸ್ಪಂದಿಸುತ್ತಾರೆ.
-ಶೇಖ್‌ ಮೊಯಿದ್ದೀನ್ ಪಿ.ಎಚ್.ಕಾಲೊನಿ
ಅಭಿವೃದ್ಧಿಗೆ ಆದ್ಯತೆ ಚರಂಡಿ ಯುಜಿಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಸ್ತೆ ದುರಸ್ತಿ ಒಳಗೊಂಡಂತೆ ಇತರೆ ಸಣ್ಣಪುಟ್ಟ ಕೆಲಸ ಬಿಟ್ಟರೆ ಈ ಭಾಗದ ಜನರಿಗೆ ಯಾವುದೇ ತೊಂದರೆಗಳಿಲ್ಲ.
-ಫಯಾಜ್ ಪಿ.ಎಚ್‌.ಕಾಲೊನಿ
ರಸ್ತೆ ದುರಸ್ತಿ ತುಂಬಾ ಕಿರಿದಾದ ರಸ್ತೆಗಳಿಗೂ ಕಾಂಕ್ರೀಟ್‌ ಹಾಕಿಸಲಾಗಿದೆ. ವಾರ್ಡ್‌ನ ಭಾಗಶಃ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಕುಡಿಯುವ ನೀರು ಚರಂಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮನೆ ಮುಂಭಾಗವೇ ವಾಹನ ನಿಲ್ಲಿಸುವುದರಿಂದ ವಾಹನಗಳ ಸಂಚಾರ ಕಷ್ಟವಾಗುತ್ತಿದೆ.
-ನೂರುನ್ನೀಸಾ, ಮಾಜಿ ಸದಸ್ಯೆ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.