ADVERTISEMENT

ಕೊರಟಗೆರೆ | ಸೂರು ಕಳೆದುಕೊಂಡವರಿಗೆ ಸದ್ಯ ಶಾಲೆಯೇ ಆಸರೆ

ಚಿಂಪುಗಾನಹಳ್ಳಿಯಲ್ಲಿ 9 ಗುಡಿಸಲು ಭಸ್ಮ: ತಹಶೀಲ್ದಾರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 14:12 IST
Last Updated 29 ಏಪ್ರಿಲ್ 2024, 14:12 IST
ಕೊರಟಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿಯಲ್ಲಿ ಗುಡಿಸಲು ಸುಟ್ಟ ಸ್ಥಳಕ್ಕೆ ತಹಶೀಲ್ದಾರ್ ಕೆ.ಮಂಜುನಾಥ ಭೇಟಿ ನೀಡಿ ನಿರಾಶ್ರಿತರೊಂದಿಗೆ ಚರ್ಚಿಸಿದರು
ಕೊರಟಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿಯಲ್ಲಿ ಗುಡಿಸಲು ಸುಟ್ಟ ಸ್ಥಳಕ್ಕೆ ತಹಶೀಲ್ದಾರ್ ಕೆ.ಮಂಜುನಾಥ ಭೇಟಿ ನೀಡಿ ನಿರಾಶ್ರಿತರೊಂದಿಗೆ ಚರ್ಚಿಸಿದರು   

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂಪುಗಾನಹಳ್ಳಿಯಲ್ಲಿ ಬೆಂಕಿ ತಗುಲಿ 9 ಗುಡಿಸಲು ಭಸ್ಮವಾದ ಸ್ಥಳಕ್ಕೆ ತಹಶೀಲ್ದಾರ್ ಕೆ. ಮಂಜುನಾಥ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿರಾಶ್ರಿತರೊಂದಿಗೆ ಕೆಲಕಾಲ ಚರ್ಚಿಸಿದರು.

ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, 9 ಗುಡಿಸಲುಗಳು ಒಂದರ ಪಕ್ಕ ಒಂದು ನಿರ್ಮಾಣ ಮಾಡಿಕೊಂಡು 10ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಇದೇ ಸ್ಥಳದಲ್ಲಿ ಎರಡು ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಇದರಿಂದ ಒಂದು ಗುಡಿಸಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ‍ಪಡೆದುಕೊಂಡಿದ್ದಾರೆ. ಇದರಿಂದ ಉಂಟಾದ ಕಿಡಿಯಿಂದ ಒಂದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ಉಳಿದ ಗುಡಿಸಲುಗಳಿಗೂ ವ್ಯಾಪಿಸಿತ್ತು ಎಂದರು.

ADVERTISEMENT

ಆಶ್ರಯ ಯೋಜನೆಯಡಿ ನಿರಾಶ್ರಿತರಿಗೆ ಮನೆ ನಿರ್ಮಾಣಕ್ಕೆ ಎರಡು ಎಕರೆ ಜಾಗ ನೀಡಲಾಗಿದೆ. ಈ ಜಾಗವನ್ನು ಫಲಾನುಭವಿಗಳಿಗೆ ಶೀಘ್ರ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು. ಗುಡಿಸಲಲ್ಲಿ ವಾಸವಿದ್ದ ಕಾರಣ ಅವರ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಸೇರಿದಂತೆ ಇತರೆ ಅಗತ್ಯ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಈ ದಾಖಲೆಗಳನ್ನು ಶೀಘ್ರ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬೇಸಿಗೆ ರಜೆ ಇರುವುದರಿಂದ ಸದ್ಯಕ್ಕೆ ಈ ಕುಟುಂಬಗಳು ಸ್ಥಳೀಯ ಸರ್ಕಾರಿ ಶಾಲೆ ಕಟ್ಟಡದಲ್ಲಿ ಉಳಿದುಕೊಳ್ಳುವಂತೆ ಅವಕಾಶ ಮಾಡಿಕೊಡಲಾಗಿದೆ. ಅದರಲ್ಲಿ ಕೆಲವರು ‘ಬೇಸಿಗೆ ಇದೆ ಬಯಲಿನಲ್ಲೆ ವಾಸಿಸುತ್ತೇವೆ’ ಎಂದು ಹೇಳಿದ್ದಾರೆ. ಆದರೆ ಮಳೆ ಬಂದಾಗ ಇದು ಕಷ್ಟವಾಗಲಿದೆ. ಹಾಗಾಗಿ ಶಾಲೆಯಲ್ಲಿ ತಂಗಲು ತಿಳಿಸಲಾಗಿದೆ. ಶೀಘ್ರ ಅಗತ್ಯ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ. ನಿವೇಶನ ಹಂಚಿಕೆ ಬಳಿಕ ಮನೆ ನಿರ್ಮಾಣಕ್ಕೆ ಕ್ರಮ ವಹಿಸಲಾಗವುದು ಎಂದು ತಿಳಿಸಿದರು.

ಕಂದಾಯ ನಿರೀಕ್ಷ ಜಯಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.