ADVERTISEMENT

ತುಮಕೂರು: ಎರಡನೇ ಡೋಸ್ ಲಸಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 4:27 IST
Last Updated 19 ಜೂನ್ 2021, 4:27 IST
ಪಾಟೀಲ
ಪಾಟೀಲ   

ತುಮಕೂರು: ಕೋವಿಡ್ ಮೊದಲನೇ ಲಸಿಕೆ ಪಡೆದು 84 ದಿನಗಳು ಪೂರೈಸಿ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿರುವ ಸಾರ್ವಜನಿಕರು ಸೇರಿದಂತೆ 21,592 ಫ್ರಂಟ್‍ಲೈನ್, ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಶನಿವಾರ, ಭಾನುವಾರ ಲಸಿಕೆ ನೀಡಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶುಕ್ರವಾರ ಜರುಗಿದ ಸಭೆಯಲ್ಲಿ ಮಾತನಾಡಿ, ‘ಸರ್ಕಾರದಿಂದ ಲಸಿಕೆ ಪೂರೈಕೆಯಾಗಲಿದ್ದು, ಶನಿವಾರದಿಂದ ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರಗಳಲ್ಲಿಯೂ ಸಮರ್ಪಕವಾಗಿ ಲಸಿಕೆ ಲಭ್ಯವಾಗಲಿದೆ’ ಎಂದರು.

ಈಗಾಗಲೇ 5,74,781 ಮೊದಲ ಡೋಸ್, 1,23,577 ಎರಡನೇ ಡೋಸ್ ಸೇರಿ ಸುಮಾರು 7 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಇದರಲ್ಲಿ ಆರೋಗ್ಯ ಕಾರ್ಯಕರ್ತರಿಗೆ 22,222 ಮೊದಲ, 17,000 ಎರಡನೇ ಡೋಸ್; ಫ್ರಂಟ್ ಲೈನ್ ವರ್ಕರ್ಸ್‍ಗೆ 19,431 ಮೊದಲ, 8,560 ಎರಡನೇ ಡೋಸ್; 18ರಿಂದ 44 ವರ್ಷದೊಳಗಿ ನವರಿಗೆ 84,032 ಮೊದಲ ಡೋಸ್‌ ನೀಡಲಾಗಿದ್ದು, ಎರಡನೇ ಡೋಸ್ ಇನ್ನೂ ಯಾರಿಗೂ ನೀಡಿಲ್ಲ ಎಂದರು.

ADVERTISEMENT

ಉಳಿದಂತೆ 45ರಿಂದ 60 ವರ್ಷದೊಳಗಿನವರಿಗೆ 2,51,318 ಮೊದಲ ಡೋಸ್, 38,472 ಎರಡನೇ ಡೋಸ್ ಹಾಗೂ 60 ವರ್ಷ ಮೇಲ್ಪಟ್ಟವರಿಗೆ 1,98,778 ಮೊದಲನೇ ಡೋಸ್, 59,545 ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಶೇ 57ರಷ್ಟು, 18 ವರ್ಷ ಮೇಲ್ಪಟ್ಟ ಆದ್ಯತಾ ಗುಂಪುಗಳಿಗೆ ಶೇ 7ರಷ್ಟು ಲಸಿಕೆ ಕೊಡಲಾಗಿದೆ ಎಂದರು.

ಬೀಜ, ರಸಗೊಬ್ಬರವನ್ನು ಹೆಚ್ಚಿನ ದರದಲ್ಲಿ ಹಾಗೂ ಕಳಪೆ ಗುಣಮಟ್ಟದ ಬೀಜ ಮಾರಾಟ ಮಾಡುವವರ ವಿರುದ್ಧ ಕ್ರಮವಹಿಸಬೇಕು. ಪರವಾನಗಿ ಇಲ್ಲದೆ ಬಿತ್ತನೆ ಬೀಜ ಮಾರಾಟ ಮಾಡುವಂತಿಲ್ಲ. ಪೊಟ್ಟಣ ಬಿಚ್ಚಿ ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.