ADVERTISEMENT

ಶಿರಾ: ಮನೆಯಲ್ಲಿಯೇ ಕುಳಿತು ಇ–ಖಾತೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 7:41 IST
Last Updated 20 ಡಿಸೆಂಬರ್ 2025, 7:41 IST
   

ಶಿರಾ: ಆಸ್ತಿ ಮಾಲೀಕರಿಗೆ ಇ-ಖಾತೆ ಪಡೆಯುವುದನ್ನು ಸರ್ಕಾರ ಸರಳೀಕರಿಸಿದ್ದು ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಇ- ಖಾತೆ ಪಡೆಯಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತ ಕೆ.ರುದ್ರೇಶ್‌ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇ- ಖಾತೆಗೆ ಅಗತ್ಯ ದಾಖಲೆಗಳಾದ ಮಾಲೀಕರ ಭಾವಚಿತ್ರ, ಕಟ್ಟಡ ಅಥವಾ ಖಾಲಿ ನಿವೇಶನದ ಸ್ವಚ್ಛಗೊಳಿಸಿದ ಜಿಪಿಎಸ್ ಭಾವಚಿತ್ರ, ಮಾಲೀಕರ ಗುರುತಿನ ಚೀಟಿ, ಚಾಲ್ತಿ ಸಾಲಿನವರೆಗೆ ಆಸ್ತಿ ತೆರಿಗೆ ಎಸ್.ಎ.ಎಸ್ ಚಲನ್, ಸಂಪರ್ಕ ಪಡೆದಿದ್ದಲ್ಲಿ ನೀರು ಮತ್ತು ಒಳಚರಂಡಿ ಶುಲ್ಕ ಚಲನ್, ಸ್ವತ್ತಿನ ಕ್ರಯ, ವಿದ್ಯುತ್ ಆರ್ ಆರ್ ಸಂಖ್ಯೆ, ಇ.ಸಿ, ಕಟ್ಟಡ ಪರವಾನಗಿ ಪತ್ರವನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ದಾಖಲಾತಿ ಸರಿ ಇದ್ದರೆ ಇ– ಖಾತೆ ನೀಡಲಾಗುವುದು ಎಂದರು.

ಈಗಾಗಲೇ ನಗರಸಭೆಯಿಂದ 10,198 ಇ– ಖಾತೆ ನೀಡಿದ್ದು, ಇನ್ನು ಮುಂದೆ ನಾಗರಿಕರೇ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದರಿಂದ ತ್ವರಿತವಾಗಿ ಇ– ಖಾತೆ ನೀಡಲು ಅನುಕೂಲವಾಗುವುದು ಎಂದರು.

ADVERTISEMENT

ನಗರದ 17 ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ 4,789 ಕುಟುಂಬಗಳಲ್ಲಿ 2,788 ಕುಟುಂಬಗಳ ಸಮೀಕ್ಷೆ ನಡೆಸಿದ್ದು ಶೀಘ್ರ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ಹಲವು ವರ್ಷಗಳಿಂದ ವಾಸ ಮಾಡುತ್ತಿದು ಅವರಿಗೆ ನಗರಸಭೆಯಿಂದ ಸೌಲಭ್ಯ ನೀಡಿದರೂ ಅವರ ಹೆಸರಿಗೆ ಯಾವುದೇ ದಾಖಲಾತಿ ಇರಲಿಲ್ಲ. ಈ ಬಗ್ಗೆ ಶಾಸಕ ಟಿ.ಬಿ.ಜಯಚಂದ್ರ ಗಮನಕ್ಕೆ ತಂದಾಗ ಅವರು ಪೌರಾಡಳಿತ ಸಚಿವರ ಜೊತೆ ಚರ್ಚಿಸಿ ಸ್ಥಳಕ್ಕೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳನ್ನು ಕಳುಹಿಸಿ ಕುಟುಂಬಗಳ ಸಮೀಕ್ಷೆ ನಡೆಸಿದ್ದು ಅರ್ಹರಿಗೆ ಅನ್ಯಾಯವಾಗದಂತೆ ಹಕ್ಕುಪತ್ರ ನೀಡಲಾಗುವುದು ಎಂದರು.

ಉಪಾಧ್ಯಕ್ಷ ಲಕ್ಷ್ಮಿಕಾಂತ್ ಮಾತನಾಡಿ, ಈಗಾಗಲೇ 2,788 ಕುಟುಂಬಗಳ ಸಮೀಕ್ಷೆ ನಡೆಸಿದ್ದು ಅದರಲ್ಲಿ 1,466 ಹಕ್ಕುಪತ್ರಗಳು ಸಿದ್ಧವಾಗಿದ್ದು ಉಳಿದ ಕುಟುಂಬದವರು ಸೂಕ್ತ ದಾಖಲೆ ನೀಡಿದರೆ ಅವರಿಗೆ ಸಹ ಹಕ್ಕುಪತ್ರ ನೀಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.