
ಶಿರಾ: ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದೆ ಶೇಂಗಾ ಇಳುವರಿ ಕುಂಠಿತಗೊಂಡಿದೆ.
ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿದ್ದು ಪ್ರತಿಬಾರಿ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ಬೆಳೆ ವಿಫಲವಾಗುತ್ತಿದ್ದು ರೈತರ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.
ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾದರೂ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಶೇಂಗಾ ಬಿತ್ತನೆ ಕಡಿಮೆಯಾಗಿದೆ. 25,040 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯ ಗುರಿ ಇದ್ದರೂ ಕೇವಲ 15,715 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಆರ್ಧ ಭಾಗ ಮಳೆಯಾಗದ ಕಾರಣ ರೈತರು ಶೇಂಗಾ ಬದಲು ರಾಗಿಯತ್ತ ಒಲವು ತೋರಿದ್ದು, 12,913 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದೆ.
ಶೇಂಗಾ ಬಿತ್ತನೆಯ ಸಮಯದಲ್ಲಿ ಮಳೆ ಬಂದಿದ್ದು ಬಿಟ್ಟರೆ ನಂತರ ಎರಡು ತಿಂಗಳು ಮಳೆ ಇಲ್ಲದೆ ಗಿಡ ಒಣಗುವಂತಾಗಿತ್ತು. ಕೆಲವೆಡೆ ಎಲೆ ಚುಕ್ಕೆ ರೋಗದಿಂದ ಗಿಡಗಳು ಒಣಗಿ ಅವುಗಳನ್ನು ಕೀಳಲು ಹರಸಾಹಸ ಪಡುವಂತಾಯಿತು.
ಈಗಾಗಲೇ ಶೇ 80ರಷ್ಟು ಶೇಂಗಾ ಕಟಾವು ಮುಗಿದಿದೆ. ಅಕ್ಟೋಬರ್ ತಿಂಗಳಲ್ಲಿ ಸತತ ಮಳೆಯಿಂದಾಗಿ ಶೇಂಗಾ ಬಿಡಿಸಲು ಸಾಧ್ಯವಾಗದೆ ಕೆಲವೆಡೆ ಬಣವೆ ಮಾಡಿ ಟಾರ್ಪಲ್ ಮುಚ್ಚಿದ್ದಾರೆ. ಮಳೆ ಮುಂದುವರೆದರೆ ಕಟಾವು ಮಾಡದೆ ಇರುವ ಶೇಂಗಾ ಸಹ ಭೂಮಿಯಲ್ಲೆ ಮೊಳಕೆ ಬರುವ ಸಾಧ್ಯತೆ ಇದೆ.
ಇಳುವರಿ ಕುಂಠಿತ: ರೈತರು ಕಷ್ಟಪಟ್ಟು ಸಾಲ ಮಾಡಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಎಕರೆಗೆ ₹30 ರಿಂದ ₹35 ಸಾವಿರ ಖರ್ಚು ಮಾಡಿದ್ದಾರೆ. ಆದರೆ ಇಳುವರಿ ಕುಸಿತವಾಗಿದೆ. ಎಕರೆಗೆ ಎಂಟು ಕ್ವಿಂಟಲ್ ಬರಬೇಕಿದ್ದ ಶೇಂಗಾ ಇಳುವರಿ, ಒಂದೂವರೆ ಕ್ವಿಂಟಲ್‌ನಿಂದ ಮೂರು ಕ್ವಿಂಟಲ್‌ಗೆ ಸೀಮಿತವಾಗಿದ್ದು, ರೈತರು ಖರ್ಚು ಮಾಡಿದ ಹಣ ಸಹ ಕೈಗೆ ಸಿಗದಂತಾಗಿದೆ.
ಶೇಂಗಾ ಬೆಳೆ ನಂಬಿ ಸಾಲ ಮಾಡಿ ಸಂಕಷ್ಟಕ್ಕೆ ಗುರಿಯಾಗಿರುವವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ಈ ಬಾರಿ ಮಳೆ ಸಮರ್ಪಕವಾಗಿ ಬಾರದ ಕಾರಣ ಶೇಂಗಾ ಬಿತ್ತನೆ ಕಡಿಮೆಯಾಗಿ ರಾಗಿ ಬಿತ್ತನೆ ಹೆಚ್ಚಿದೆ. ಶೇಂಗಾ ಇಳುವರಿ ಸಹ ಕುಂಠಿತವಾಗಿದೆ. ಕೃಷಿ ತೋಟಗಾರಿಕೆ ಕಂದಾಯ ಸೇರಿದಂತೆ ಐದು ಇಲಾಖೆಗಳಿಂದ ತಾಲ್ಲೂಕಿನ 350ರಿಂದ 400 ಜಮೀನಿನ ಶೇಂಗಾದ ಸರ್ವೆ ನಡೆಸಿದ್ದು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.