ಶಿರಾ: ಗುರುಭವನ ನಿರ್ಮಾಣಕ್ಕಾಗಿ ಶಾಸಕರ ಅನುದಾನದಲ್ಲಿ ₹25 ಲಕ್ಷ ನೀಡುವುದರ ಜೊತೆಗೆ ಸರ್ಕಾರದಿಂದ ₹1 ಕೋಟಿ ಮಂಜೂರು ಮಾಡಿಸಿಕೊಡುವುದಾಗಿ ಶಾಸಕ ಟಿ.ಬಿ.ಜಯಚಂದ್ರ ಅಶ್ವಾಸನೆ ನೀಡಿದರು.
ನಗರದ ವಿವೇಕಾನಂದ ಕ್ರೀಡಾಂಗಣದ ಗುರುಭವನದ ನಿವೇಶನದಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರ 138ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಗುರುಭವನ ನಿರ್ಮಾಣಕ್ಕಾಗಿ ಕ್ರೀಡಾಂಗಣವನ್ನು ಬೇರೆಡೆ ಸ್ಥಳಾಂತರ ಮಾಡಲು 15 ಎಕರೆ ಜಾಗ ನೀಡಲಾಗಿದ್ದು ಜಾಗದ ಸಮಸ್ಯೆ ಇಲ್ಲ. ಗುರುಭವನ ನಿರ್ಮಾಣಕ್ಕೆ ಶಿಕ್ಷಕರು ಮುಂದಾಗಬೇಕು ಎಂದರು.
ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ನೀಡಿದ ಅಶ್ವಾಸನೆಯಂತೆ ಸರ್ಕಾರಿ ನೌಕರರನ್ನು ಹೊಸ ಪಿಂಚಣಿ ಪದ್ದತಿಯಿಂದ (ಎನ್‌ಪಿಎಸ್) ಹಳೆಯ ಪಿಂಚಣಿ ಪದ್ಧತಿಗೆ (ಒಪಿಎಸ್) ಬದಲಾವಣೆ ಮಾಡಲು ಸರ್ಕಾರ ಬದ್ಧವಾಗಿದೆ. ಇದರ ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ. ಉತ್ತಮ ಶಿಕ್ಷಕ ಸದಾ ವಿದ್ಯಾರ್ಥಿಯಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಗುರುಭವನ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.
ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ನಗರಸಭೆ ಅಧ್ಯಕ್ಷ ಜೀಷಾನ್ ಮೆಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜೇಯಕುಮಾರ್, ಪೌರಾಯುಕ್ತ ರುದ್ರೇಶ್, ತಾ.ಪಂ ಇಒ ಆರ್.ಹರೀಶ್, ಬಿಇಒ ಸಿ.ಎಸ್.ಕೃಷ್ಣಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಚಂದ್ರಪ್ಪ, ಬಿಆರ್‌ಸಿ ಎಚ್.ರಂಗಪ್ಪ ಸೇರಿದಂತೆ ಶಿಕ್ಷಕರು ಹಾಗೂ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
‘ಪ್ರಜಾವಾಣಿ’ ವರದಿ ಪ್ರಸ್ತಾಪ ‘ಪ್ರಜಾವಾಣಿ’ಯಲ್ಲಿ ಸೆಪ್ಟೆಂಬರ್ 9ರಂದು ಪ್ರಕಟವಾದ ‘ಗುರುಭವನದ ನಿರ್ಮಾಣಕ್ಕೆ ಇಚ್ಛಾಶಕ್ತಿ ಕೊರತೆ’ ವರದಿಯನ್ನು ಶಿಕ್ಷಕರ ದಿನಾಚರಣೆಯಲ್ಲಿ ಪ್ರಸ್ತಾಪಿಸಿದ ಶಾಸಕ ಟಿ.ಬಿ.ಜಯಚಂದ್ರ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರು ಪತ್ರಿಕೆಯಲ್ಲಿ ಬಂದಿರುವ ವರದಿ ಸತ್ಯವಾಗಿದೆ. ಈಗಲಾದರೂ ಶಿಕ್ಷಕರು ಭಿನ್ನಾಭಿಪ್ರಾಯ ಬದಿಗಿಟ್ಟು ಗುರುಭವನ ನಿರ್ಮಾಣಕ್ಕೆ ಮುಂದಾಗಿ. ಅನುದಾನ ನೀಡಲಾಗುವುದು ಎಂದು ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.