
ಶಿರಾ: ನಗರ ಪ್ರದೇಶ ದಾಟಿ ಗ್ರಾಮೀಣ ಭಾಗದತ್ತ ಮುಖ ಮಾಡಿದರೆ ಗುಂಡಿಬಿದ್ದ ರಸ್ತೆಗಳು ಮೊದಲು ಆಹ್ವಾನಿಸುತ್ತವೆ. ಅಲ್ಲಲ್ಲಿ ಚೂರುಪಾರು ಡಾಂಬರು ಮೆತ್ತಿಕೊಂಡ ಕೊರಕಲು ಬಿದ್ದ ಮಣ್ಣಿನ ಮಾರ್ಗಗಳು. ಆ ರಸ್ತೆಯಲ್ಲೇ ಪ್ರಯಾಸಪಟ್ಟು ಸಾಗಬೇಕಾದ ಅನಿವಾರ್ಯತೆ ಗ್ರಾಮೀಣ ಜನರದ್ದು.
ಇತ್ತೀಚೆಗೆ ತಾಲ್ಲೂಕಿನಾದ್ಯಂತ ಬೀಳುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದ ರಸ್ತೆಗಳು ಇನ್ನಷ್ಟು ಹದಗೆಟ್ಟಿವೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಇಕ್ಕೆಲಗಳಲ್ಲಿ ಸರಿಯಾದ ವ್ಯವಸ್ಥೆ ಇರದ ಕಾರಣ ಬಹುತೇಕ ಗ್ರಾಮೀಣ ರಸ್ತೆಗಳು ಕೊರಕಲು ಬಿದ್ದಿವೆ. ರಸ್ತೆ ಅಕ್ಕಪಕ್ಕದ ಕುರುಚಲು ಗಿಡ, ಜಾಲಿ ಗಿಡಗಳು ಹರಿಯುವ ನೀರನ್ನು ತಡೆಯುತ್ತವೆ. ಆಗ ಸಹಜವಾಗಿ ಕೊರಕಲು, ಗುಂಡಿಗಳ ಪ್ರಮಾಣ ಹೆಚ್ಚಾಗುತ್ತದೆ. ಕೆಲವೆಡೆ ಚರಂಡಿಗಳು ಇದ್ದರೂ ಅವುಗಳ ಸರಿಯಾದ ನಿರ್ವಹಣೆ ಇಲ್ಲದೆ ರಸ್ತೆ ಮೇಲೆ ಮಳೆ ನೀರು ಹರಿದು ರಸ್ತೆಗಳು ಹಾಳಾಗುತ್ತಿವೆ.
ಕೋವಿಡ್ ನಂತರ ಖಾಸಗಿ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಬಹುತೇಕರು ದ್ವಿಚಕ್ರವಾಹನಗಳನ್ನು ಅವಲಂಬಿಸಿದ್ದಾರೆ. ರಸ್ತೆ ಗುಂಡಿಗಳಿಂದ ಕೂಡಿರುವುದರಿಂದ ಹಾಗೂ ಮಳೆ ಬಿದ್ದರೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದೂ ಕಷ್ಟವಾಗುತ್ತಿದೆ.
ತಾಲ್ಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು, ಐದು ರಾಜ್ಯ ಹೆದ್ದಾರಿಗಳು, 39 ಜಿಲ್ಲಾ ಮುಖ್ಯ ರಸ್ತೆಗಳಿವೆ. ಇವುಗಳ ಜೊತೆಗೆ ಹಲವು ಗ್ರಾಮಗಳಿಗೆ ಸಂಪರ್ಕ ರಸ್ತೆಗಳಿದ್ದು ಬಹುತೇಕ ರಸ್ತೆಗಳು ದುರಸ್ತಿ ಕಾಣಬೇಕಿವೆ.
ಶಿರಾ- ಅಮರಾಪುರ ರಸ್ತೆ ಅಭಿವೃದ್ಧಿ ಕಾಮಗಾರಿ ಹಲವು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದು, ಇದು ಮುಗಿಯುವುದು ಯಾವಾಗ ಎನ್ನುವ ಪ್ರಶ್ನೆ ಮೂಡುವಂತಾಗಿದೆ. ಹಲವೆಡೆ ಗುಂಡಿಗಳಿಂದ ಅಪಘಾತ ಸಂಭವಿಸಿ ಪ್ರಾಣ ಹಾನಿ ಸಂಭವಿಸಿದರೂ ಅಧಿಕಾರಿಗಳು ಎಚ್ಚರ ವಹಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.
ಬುಕ್ಕಾಪಟ್ಟಣ- ಹಾಗಲವಾಡಿ ರಸ್ತೆ, ಬುಕ್ಕಾಪಟ್ಟಣ ತಾವರೆಕೆರೆ ರಸ್ತೆ, ಹೊನ್ನೇನಹಳ್ಳಿ- ದೊಡ್ಡ ಆಗ್ರಹಾರ ರಸ್ತೆ, ಸಾಕ್ಷಿಹಳ್ಳಿ ರಸ್ತೆ, ಬೆಂಚೆ ಗೇಟ್‌ನಿಂದ ಎನ್ಎಚ್- 48ರ ಮೂಲಕ ತೋವಿನಕೆರೆ ರಸ್ತೆ, ತರೂರು- ತೋವಿನಕೆರೆ ರಸ್ತೆ, ಅಮಲಗೊಂದಿ ರಸ್ತೆ, ದೊಡ್ಡ ಆಲದಮರದಿಂದ ಹುಂಜನಾಳ್ ರಸ್ತೆ, ತಾವರೆಕೆರೆ- ಪುರಲೆಹಳ್ಳಿ ಭೂತಪ್ಪನಗುಡಿನ ಗುಡಿ ರಸ್ತೆ, ಮದ್ದಾಕನಹಳ್ಳಿ ರಸ್ತೆ, ಕೊಟ್ಟ ಗೇಟ್‌ನಿಂದ ಆಂಧ್ರಪ್ರದೇಶದ ಗಡಿ ರಸ್ತೆ, ಯಾದಲಡಕು- ವೀರಬೊಮ್ಮನಹಳ್ಳಿ ರಸ್ತೆ, ಸಿದ್ದನಹಳ್ಳಿ ರಸ್ತೆ, ಎನ್ಎಚ್- 48ರಿಂದ ಮರಳಪ್ಪನಹಳ್ಳಿ- ತಾಳಗುಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಸಂಚರಿಸಲು ಕಷ್ಟವಾಗುತ್ತಿದೆ.
ನಗರ ಪ್ರದೇಶದಲ್ಲಿ ಸಹ ರಸ್ತೆಗಳು ಹದಗೆಟ್ಟಿದ್ದು ಕೆಲವು ಬಡಾವಣೆಗಳಲ್ಲಿ ಇದುವರೆಗೂ ರಸ್ತೆಗಳು ಡಾಂಬರ್ ಕಂಡಿಲ್ಲ. ಹಳೆ ರಾಷ್ಟ್ರೀಯ ಹೆದ್ದಾರಿ- 4ರ ಎಪಿಎಂಸಿ ಬಳಿಯ ರಸ್ತೆ ಯಾವ ಇಲಾಖೆಗೆ ಸೇರುವುದು ಎನ್ನುವ ಗೊಂದಲದಿಂದಾಗಿ ದೊಡ್ಡ ಗುಂಡಿಗಳು ಇದ್ದರೂ ಕಣ್ಣುಮುಚ್ಚಿ ಕುಳಿತಿದ್ದು ಸಾರ್ವಜನಿಕರಿಂದ ಹೆಚ್ಚು ದೂರುಗಳು ಬಂದಾಗ ಮಣ್ಣು ಸುರಿದು ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರುತ್ತಾರೆ ನಗರ ನಿವಾಸಿಗಳು.
ಕೇಂದ್ರ ಸರ್ಕಾರದ ನೆರವು ಕೋರಲಿ
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಅಭಿವೃದ್ಧಿ ಮರೀಚಿಕೆಯಾಗಿದೆ. ರಾಜ್ಯ ಸರ್ಕಾರ ತನ್ನ ಪ್ರತಿಷ್ಠೆ ಬದಿಗಿಟ್ಟು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ರಸ್ತೆ ಅಭಿವೃದ್ಧಿ ಕೈಗೊಳ್ಳಲಿ. ಸಂಚಾರ ಉತ್ತಮವಾಗಿದ್ದರೆ ಅಭಿವೃದ್ಧಿಗೆ ಪೂರಕವಾಗುವುದು. ರಮೇಶ್ಬಾಬು ಬಾಲಬಸವನಹಳ್ಳಿ
ಗ್ರಾಮೀಣ ಬದುಕಿನ ಆರ್ಥಿಕತೆ ಗ್ರಾಮೀಣ ಭಾಗದ ರಸ್ತೆಗಳು ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಇರುವವರಿಗೆ ನಗರಕ್ಕೆ ಬಂದು ಹೋಗುವವರಿಗೆ ದಿನನಿತ್ಯದ ಸಂಗಾತಿ. ರಸ್ತೆಯೇ ಸರಿ ಇರದಿದ್ದರೆ ಗ್ರಾಮೀಣ ಭಾಗದ ಆರ್ಥಿಕತೆ ಸಾಮಾಜಿಕ ಪರಿಸ್ಥಿತಿ ಅಭಿವೃದ್ಧಿ ಎಲ್ಲವೂ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತದೆ. ಹಾಗಾಗಿ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಅದ್ಯತೆ ನೀಡಿ ಉತ್ತಮ ರಸ್ತೆ ನೀಡಿದರೆ ಅನುಕೂಲವಾಗುವುದು.ಲಿಂಗರಾಜು ಹುಣಸೆಕಟ್ಟೆ.
ಕೆಲವು ಕಡೆ ಅನುದಾನವಿಲ್ಲದೆ ಕಾಮಗಾರಿ ಪ್ರಾರಂಭವಾಗಿಲ್ಲ. ಮತ್ತೆ ಕೆಲವೆಡೆ ಅನುದಾನವಿದ್ದರೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಶಾಸಕರು ಮತ್ತು ಅಧಿಕಾರಿಗಳು ಈ ಬಗ್ಗೆ ಹೆಚ್ಚು ಒತ್ತು ನೀಡಬೇಕು.ಎನ್.ಮಂಜುನಾಥಸ್ವಾಮಿ ಗ್ರಾ.ಪಂ ಸದಸ್ಯ ನಾದೂರು
ಜನರ ಜೀವ ಉಳಿಸಿ
ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಹಾಳಾಗಿದ್ದು ಅಪಘಾತಗಳಿಗೆ ಕಾರಣವಾಗುತ್ತಿದೆ. ಅವುಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಜನರ ಜೀವ ಉಳಿಸಬೇಕು. ಎಚ್.ಕೆಂಗರಾಜು ಕಾಮಗೊಂಡನಹಳ್ಳಿ ಗುಣಮಟ್ಟದ ರಸ್ತೆ ನಿರ್ಮಿಸಿ ರಸ್ತೆಗಳು ಗುಂಡಿಗಳಿಂದ ಕೂಡಿದ್ದು ಮಳೆ ಬಂದರೆ ನೀರು ತುಂಬಿಕೊಂಡು ರಸ್ತೆ ಕಾಣುವುದೇ ಕಷ್ಟವಾಗುತ್ತದೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದು ಸಹ ಕಷ್ಟವಾಗುತ್ತಿದೆ. ರಸ್ತೆ ಗುಂಡಿಗಳನ್ನು ಮುಚ್ಚುವ ಬದಲು ಗುಣಮಟ್ಟದ ರಸ್ತೆ ನಿರ್ಮಿಸಿದರೆ ಹೆಚ್ಚು ಅನುಕೂಲ.ಕರಿಯಪ್ಪ ನೇರಲಗುಡ್ಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.