
ತುಮಕೂರು: ‘ದೇಶದ ಚರಿತ್ರೆಯಲ್ಲಿ ನನ್ನದು ಹಿಂದೂ ಸಾಮ್ರಾಜ್ಯ ಎಂದು ಬಹಿರಂಗವಾಗಿ ಘೋಷಣೆ ಮಾಡಿದ ರಾಜನಿದ್ದರೆ ಅದು ಶಿವಾಜಿ ಮಹಾರಾಜ ಮಾತ್ರ’ ಎಂದು ಜಿಲ್ಲಾ ಮರಾಠ ಕ್ಷತ್ರಿಯ ಪರಿಷತ್ತಿನ ಗೌರವಾಧ್ಯಕ್ಷ ನಾಗೇಶ್ವರ್ ರಾವ್ ಗಾಯಕವಾಡ ಅಭಿಪ್ರಾಯಪಟ್ಟರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗುರುವಾರ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಮರಾಠ ಕ್ಷತ್ರಿಯ ಪರಿಷತ್ ವತಿಯಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ, ಧರ್ಮ, ಬಡವ, ಬಲ್ಲಿದ ಎಂಬ ಭೇದ, ಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಶಿವಾಜಿ ಕಾಣುತ್ತಿದ್ದರು. ತನ್ನ ಸೇನೆ, ಆಡಳಿತದಲ್ಲಿ ಎಲ್ಲ ಧರ್ಮೀಯರಿಗೂ ಅವಕಾಶ ನೀಡಿದ್ದರು. ಚಿಕ್ಕಂದಿನಲ್ಲಿ ಆಶ್ರಯ ಪಡೆದಿದ್ದ ಕರ್ನಾಟಕದ ಗವಿ ಗಂಗಾಧರಸ್ವಾಮಿ ದೇವಾಲಯದ ಬಗ್ಗೆ ಬಹಳ ಭಕ್ತಿ ಇಟ್ಟುಕೊಂಡು, ಇತರೆ ರಾಜರಿಗೆ ಮಾದರಿಯಾಗಿ ಬದುಕಿದ್ದರು ಎಂದು ಸ್ಮರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಹಿಂದೂ ಸಮ್ರಾಟನೆಂದು ಕರೆಯಲ್ಪಡುವ ಛತ್ರಿಪತಿ ಶಿವಾಜಿ ಮಹಾರಾಜರು, ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸಕ್ಕೆ ಹೆಸರಾಗಿದ್ದರು. ಭಾರತೀಯ ಚರಿತ್ರೆಯಲ್ಲಿ ಶಿವಾಜಿ ಆಡಳಿತ ಮಹತ್ವದ್ದು’ ಎಂದು ಹೇಳಿದರು.
ಶಿವಾಜಿ ಆಡಳಿತದಲ್ಲಿ ಮಹಾರಾಷ್ಟ್ರದಿಂದ ತಂಜಾವೂರುವರೆಗೆ ಮರಾಠ ಸಾಮ್ರಾಜ್ಯ ವಿಸ್ತರಿಸಿತ್ತು. ಕನ್ನಡ, ತಮಿಳು, ತೆಲುಗು ಭಾಷೆ ಬಗ್ಗೆ ಅಪಾರ ಗೌರವ ಹೊಂದಿದ್ದು, ಭಾಷಾ ಸಾಮರಸ್ಯಕ್ಕೆ ನಾಂದಿ ಹಾಡಿದ್ದರು. ಕರ್ನಾಟಕದ ಕಿತ್ತೂರು, ಕೆಳದಿ ಸಂಸ್ಥಾನದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
ಜಿಲ್ಲಾ ಮರಾಠ ಕ್ಷತ್ರಿಯ ಪರಿಷತ್ತಿನ ಅಧ್ಯಕ್ಷ ಜನಾರ್ದನರಾವ್ ಸೋನಾಲೆ, ಕಾರ್ಯದರ್ಶಿ ಶ್ರೀನಿವಾಸರಾವ್ ಸಾಳಂಕೆ, ಖಜಾಂಚಿ ಹರೀಶ್ ರಾವ್ ಮೊರೆ, ಜಂಟಿ ಕಾರ್ಯದರ್ಶಿ ರಮೇಶ್ ರಾವ್ ಸಿಂಧೆ, ಸಂಘಟನಾ ಕಾರ್ಯದರ್ಶಿ ಗಂಗೋಜಿರಾವ್ ನಲ್ಲೋಡೆ, ನಿರ್ದೇಶಕರಾದ ಹರ್ಷ ಕದಂ, ಬನಶಂಕರಿ ಬಾಬು, ಗಣೇಶ್ ರಾವ್ ಭೊಂಸ್ಲೆ, ಮೋಹನ್ ರಾವ್, ಮುರಳಿಧರ್ ಸೋನಾಲೆ, ಶಿವಾಜಿ ಶಿಂಧೆ, ರಾಮಚಂದ್ರ ಶಿಂಧೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.