ADVERTISEMENT

ಜನವರಿ 19ರಂದು ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ: ಲಕ್ಷ ಜನರು ಸೇರುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 14:37 IST
Last Updated 14 ಜನವರಿ 2020, 14:37 IST
ಶಿವಕುಮಾರ ಸ್ವಾಮೀಜಿ
ಶಿವಕುಮಾರ ಸ್ವಾಮೀಜಿ   

ತುಮಕೂರು: ಇಲ್ಲಿನ ಸಿದ್ಧಗಂಗಾ ಮಠದಲ್ಲಿ ಜ.19ರಂದು ಶಿವಕುಮಾರ ಸ್ವಾಮೀಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ ನಡೆಯಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರಂಭ ಉದ್ಘಾಟಿಸುವರು. ಸಿದ್ಧಲಿಂಗ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರ ಸ್ವಾಮಿ, ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ ಪಾಲ್ಗೊಳ್ಳುವರು ಎಂದು ಸಿದ್ಧಗಂಗಾ ತಾಂತ್ರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಚನ್ನಬಸಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಭಾನುವಾರ ಬಿಡುವು ಇದೆ. ಅವರನ್ನು ಕಾರ್ಯಕ್ರಮಕ್ಕೆ ಬಳಸಿಕೊಳ್ಳಬಹುದು. ಈ ಕಾರಣಕ್ಕೆ ಅಂದು ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ. ಕೈಗಾರಿಕೋದ್ಯಮಿ ದೆಹಲಿಯ ಮುಖೇಶ್ ಗರ್ಗ್ ಹಾಗೂ ನವದೆಹಲಿಯ ಉಗ್ರನಿಗ್ರಹ ದಳದ ಅಧ್ಯಕ್ಷ ಮಣಿಂದರ್‌ಜೀತ್ ಸಿಂಗ್ ಬಿಟ್ಟ ಅವರನ್ನು ಸನ್ಮಾನಿಸಲಾಗುವುದು ಎಂದರು.

ADVERTISEMENT

ಬೆಂಗಳೂರಿನ ಶಿವಕುಮಾರ ಸ್ವಾಮೀಜಿ ಅನ್ನದಾನ ಟ್ರಸ್ಟ್‌ನಿಂದ ಕಾರ್ಯಸೂಚಿ ಕೈಪಿಡಿ ಹಾಗೂ ವೆಬ್ ಸೈಟ್ ಬಿಡುಗಡೆ ಮಾಡಲಾಗುವುದು. ಸಿ.ಎನ್.ಸದಾಶಿವಯ್ಯ ವಿರಚಿತ ‘ಗುರು ಕರುಣೆ ಮತ್ತು ನಿಷ್ಠೆ’ ಬ್ಯಾಲಕೆರೆ ಶಿವಣ್ಣ ರಚಿತ ‘ಯೋಗಾಂಗ ತ್ರಿವಿಧಿ’, ಮುದ್ದೇನಹಳ್ಳಿ ನಂಜಯ್ಯ ಅವರ ‘ಶಿವಕುಮಾರ ಚರಿತ’ ಪುಸ್ತಕ ಬಿಡುಗಡೆ ಆಗಲಿವೆ ಎಂದರು.

ಅಂದು ಬೆಳಿಗ್ಗೆ 9.30ಕ್ಕೆ ಸುಗಮ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 3ಕ್ಕೆ ಜಾನಪದ ಜಾತ್ರೆ ಜರುಗಲಿದೆ. ಮಠದ ಆವರಣದ 7 ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ‌. ಒಂದು ಕಡೆ 10 ಸಾವಿರ ಜನರು ಊಟ ಮಾಡಲು ವ್ಯವಸ್ಥೆ ಇದೆ ಎಂದು ಹೇಳಿದರು.

‘ಶಿವಕುಮಾರ ಸ್ವಾಮೀಜಿ ಅವರು ನಿಂತು ಊಟ ಮಾಡುವುದನ್ನು ಒಪ್ಪುತ್ತಿರಲಿಲ್ಲ. ಆ ಕಾರಣಕ್ಕೆ ಎಲ್ಲಿಯೂ ಬಫೆ ವ್ಯವಸ್ಥೆ ಇಲ್ಲ‌. ಬೆಳಿಗ್ಗೆ 11.30 ಊಟ ಆರಂಭವಾಗಲಿದೆ. ರಾತ್ರಿ ಎಷ್ಟು 11.30ರವರೆಗೂ ಊಟ ಇರಲಿದೆ. ಬೂಂದಿ, ಕಿರು, ಅನ್ನ ಸಾಂಬಾರು ಮಜ್ಜಿಗೆ ಮೆನುವಿನಲ್ಲಿ ಇರಲಿದೆ’ ಎಂದು ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ತಿಳಿಸಿದರು.

ಕಾರ್ಯಕ್ರಮಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆ ಮುಖ್ಯ. ಕಾರ್ಯಕ್ರಮ ನಂತರದ್ದು ಎಂದು ಸ್ವಾಮೀಜಿ ಹೇಳುತ್ತಿದ್ದರು. ಅದರಂತೆಯೇ ನಡೆದುಕೊಳ್ಳುತ್ತೇವೆ ಎಂದರು.

‘ಸದ್ಯ ಮಠಕ್ಕೆ ನೀರಿನ ಸಮಸ್ಯೆ ಇಲ್ಲ. ಮಠಕ್ಕೆ 10 ರಿಂದ 12 ಕೊಳವೆ ಬಾವಿ ಇದೆ. ಬೇಸಿಗೆಯಲ್ಲಿ ಸ್ವಲ್ಪ ನೀರಿನ ಸಮಸ್ಯೆ ಉಂಟಾಗುತ್ತದೆ’ ಎಂದು ತಿಳಿಸಿದರು.

ಸಿದ್ಧಗಂಗಾ ತಾಂತ್ರಿಕ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.