ಮಧುಗಿರಿ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 60 ಸಾವಿರ ಶಿಕ್ಷಕರ ಕೊರತೆ ಮತ್ತು 50 ಸಾವಿರಕ್ಕೂ ಹೆಚ್ಚು ಕೊಠಡಿಗಳ ಕೊರತೆಯಿದ್ದು, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಪ್ರಾರಂಭ ಮಾಡಲು ಹೊರಟಿದೆ. ಈಗಲೇ ಶಿಕ್ಷಕರ ಕೊರತೆಯಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಬರೀ ಗ್ಯಾರಂಟಿ ಯೋಜನೆಗಳ ಜಪ ಮಾಡುತ್ತಿದ್ದಾರೆ. ಶಾಲೆಗಳು ಆರಂಭವಾಗಿದ್ದರೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈವರೆಗೆ ಒಂದೇ ಒಂದು ಶಿಕ್ಷಕರನ್ನೂ ನೇಮಿಸಿಲ್ಲ ಎಂದು ದೂರಿದರು.
ಕನ್ನಡ ಓದಲು ಬಾರದವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದ್ದಾರೆ. ಇವರು ಶಿಕ್ಷಣ ಸಚಿವರಾಗಿ ಮುಂದುವರಿಯಲು ಅರ್ಹರಲ್ಲ ಎಂದರು.
ವಿದ್ಯಾರ್ಥಿ ವೇತನ ನಿಂತು ಹೋಗಿದೆ. ಶಾಲೆಗಳಿಗೆ ಮೂಲ ಸೌಕರ್ಯ ನೀಡದೆ, ಶಾಲೆಗಳನ್ನು ಅಭಿವೃದ್ಧಿ ಮಾಡದೇ ಅನುದಾನಿತ ಮತ್ತು ಸರ್ಕಾರಿ ಶಾಲೆಗಳನ್ನು ಸರ್ವನಾಶ ಮಾಡುತ್ತಿದ್ದಾರೆ. 5,8 ಮತ್ತು 9ನೇ ತರಗತಿ ಮಕ್ಕಳಿಗೆ ಮೂರು ಪರೀಕ್ಷೆಗಳನ್ನು ಮಾಡಿ ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದರು.
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವೈ.ಎ. ನಾರಾಯಣ ಸ್ವಾಮಿ ಸ್ಪರ್ಧಿಸಿದ್ದು, ಅವರಿಗೆ ಯಾವುದೇ ವಿರೋಧಿ ಅಲೆ ಇಲ್ಲ. ಅವರು ಶಿಕ್ಷಕರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರ ಎಂದರು.
ಭಾಜಪ ಜಿಲ್ಲಾ ಘಟಕದ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ಪ್ರಧಾನ ಕಾರ್ಯದರ್ಶಿ ಲತಾ ಪ್ರದೀಪ್, ಮಂಡಲ ಅಧ್ಯಕ್ಷ ನಾಗೇಂದ್ರ, ನಿವೃತ್ತ ಶಿಕ್ಷಕರಾದ ಧನಂಜಯ ಪಾಟೀಲ, ಲೋಕೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.