ತುಮಕೂರು: ಬಂಡಾಯ, ದಲಿತ ಸಾಹಿತ್ಯದ ಸೃಷ್ಟಿಗೆ ಮೂಲ ಕಾರಣವಾಗಿರುವ ಸಿದ್ಧಲಿಂಗಯ್ಯ ಅವರು ನಾಟಕ, ವಿಮರ್ಶೆ, ಪ್ರಬಂಧ,ಆತ್ಮಕಥನ ಕ್ಷೇತ್ರದಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ದಲಿತ ಕವಿ ಎಂಬುದಕ್ಕಿಂತ ಅವರೊಬ್ಬ ನಿಜವಾದ ‘ಕಲಿತ ಕವಿ’ ಎಂದು ಸರ್ಕಾರಿ ಅಭಿಯೋಜಕ ಎಸ್. ರಾಜಣ್ಣ ಅಭಿಪ್ರಾಯಪಟ್ಟರು.
ದಲಿತ ಛಲವಾದಿ ಮಹಾಸಭಾ, ಭೈರವ ಕಲಾಭವನದಿಂದ ಹಮ್ಮಿಕೊಂಡಿದ್ದ ಡಾ.ಸಿದ್ಧಲಿಂಗಯ್ಯ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬಾಲ್ಯದಿಂದಲೇ ಕವಿತೆ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದರು. ತಮ್ಮ ಸುತ್ತಮುತ್ತಲಿನ ಸಾಮಾಜಿಕ ಜನಜೀವನ, ನೋವು– ನಲಿವುಗಳನ್ನು ಕಾವ್ಯ, ಗದ್ಯ, ಬರಹಗಳ ಮೂಲಕ ಚಿತ್ರಿಸಿದ್ದರು’ ಎಂದು ನೆನಪಿಸಿಕೊಂಡರು.
ವರ್ಚುವಲ್ ಮೂಲಕ ಮಾತನಾಡಿದ ಡಾ.ಗೋವಿಂದರಾಯ, ‘ಸಿದ್ಧಲಿಂಗಯ್ಯ ವಿಶಿಷ್ಟ ಪ್ರತಿಭೆ. ಕವಿತೆಯಿಂದ ಸಮಾಜವನ್ನು ಎಚ್ಚರಿಸುವ, ತಿದ್ದುವ, ಪ್ರತಿಭಟಿಸುವ ಕೆಲಸ ಮಾಡಿದರು’ ಎಂದು ತಿಳಿಸಿದರು.
ಡಾ.ಸಿದ್ಧಲಿಂಗಯ್ಯ ಸಹಪಾಠಿ ಗೆಳೆಯರಾಗಿದ್ದ ಬಿ.ಎಸ್. ಗಂಗಾಧರಯ್ಯ,ಅವರೊಂದಿಗಿನ ವ್ಯಾಸಂಗದ ಸಮಯವನ್ನು ಸ್ಮರಿಸಿದರು. ವಿಶೇಷವಾಗಿ ಭೂಸಾ ಚಳವಳಿಯಲ್ಲಿ ಭಾಗಿಯಾಗಿದ್ದ ರೀತಿ, ಕವಿಯಾಗಿ ಕ್ರಾಂತಿಗೀತೆ, ಸಾಹಿತ್ಯ ರಚನೆ, ದಲಿತ ಹೋರಾಟಕ್ಕೆಆಸರೆಯಾಗಿದ್ದ ಬಗ್ಗೆ ನೆನಪು ಮಾಡಿಕೊಂಡರು.
ಮಹಾಸಭಾ ಅಧ್ಯಕ್ಷ ಡಾ.ಪಿ. ಚಂದ್ರಪ್ಪ ಮಾತನಾಡಿದರು.
ವರ್ಚುವಲ್ ತಾಂತ್ರಿಕ ಸಂವಾದದಲ್ಲಿ ಜಿ. ಹರ್ಷಧರ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಶೇಖರ್, ಎಚ್.ಬಿ. ಪುಟ್ಟಬೋರಯ್ಯ, ರಾಜಯ್ಯ, ನಂಜುಂಡಯ್ಯ, ಸಿದ್ಧನಂಜಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.