ADVERTISEMENT

ವಿನಾಯಕನಿಗೆ ಅದ್ಧೂರಿಯ ‘ಬೀಳ್ಕೊಡುಗೆ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 17:03 IST
Last Updated 3 ಅಕ್ಟೋಬರ್ 2019, 17:03 IST
ನಗರದ ರಸ್ತೆಗಳಲ್ಲಿ ವಿನಾಯಕ ವಿಸರ್ಜನಾ ಮಹೋತ್ಸವದ ಮೆರವಣಿಗೆ ನಡೆಯಿತು
ನಗರದ ರಸ್ತೆಗಳಲ್ಲಿ ವಿನಾಯಕ ವಿಸರ್ಜನಾ ಮಹೋತ್ಸವದ ಮೆರವಣಿಗೆ ನಡೆಯಿತು   

ತುಮಕೂರು: ವಿಶೇಷ ಪೂಜೆ, ವಿವಿಧ ವಾದ್ಯಗಳ ಸ್ವರನಾದ, ಭಕ್ತಿಗೀತೆಗಳ ಗಾಯನ, ಡಿ.ಜೆ.ಶಬ್ದಕಂಪನದೊಂದಿಗೆ ನೃತ್ಯ, ಜೈಕಾರಗಳ ಸುರಿಮಳೆಯೊಂದಿಗೆ 43ನೇ ವರ್ಷದ ಸಿದ್ಧಿ ವಿನಾಯಕ ವಿಸರ್ಜನಾ ಮಹೋತ್ಸವ ನಗರದಲ್ಲಿ ಗುರುವಾರ ನೆರವೇರಿತು.

ಸಿದ್ಧಿ ವಿನಾಯಕ ಸೇವಾ ಮಂಡಳಿ ಆಯೋಜಿಸಿದ್ದ ಈ ಉತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಸಾರ್ವಜನಿಕರು ದಾರಿಯ ಇಕ್ಕೆಲಗಳಲ್ಲಿ ನಿಂತು, ಮಹಡಿಗಳ ಮೇಲೆ ಕೂತು ಗಣೇಶನ ಮೆರವಣಿಗೆ ಕಣ್ತುಂಬಿಕೊಂಡರು. ಮೆರವಣಿಗೆಯಲ್ಲಿದ್ದ ವಿದ್ಯುತ್‌ಚಾಲಿತ ಚಲನೆಯುಳ್ಳ ಶಿವನ ಪ್ರತಿಮೆ ಎಲ್ಲರ ಗಮನ ಸೆಳೆಯಿತು.

ಚಂಡೆ, ನಗಾರಿ, ತಮಟೆಗಳ ಸಪ್ಪಳ ಜನರಿಗೆ ಕರ್ಣಾನಂದ ನೀಡಿತು. ಪಟ ಕುಣಿತ, ಗೊಂಬೆ ಕುಣಿತ, ಕರಗ ನೃತ್ಯ, ವೀರಗಾಸೆ ಕಣ್ಮನ ಸೆಳೆದವು. ಉತ್ಸಾಹಿಗಳು ನಾಸಿಕ್ ಡೋಲ್‌ಗಳ ನಾದಕ್ಕೆ ಹೆಜ್ಜೆ ಹಾಕಿದರು.

ADVERTISEMENT

ವಿನಾಯಕ ವಿಸರ್ಜನಾ ಮಹೋತ್ಸವಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಅವರು ಬೆಳಿಗ್ಗೆ 11.30ಕ್ಕೆ ಚಾಲನೆ ನೀಡಿದರು. ರಾತ್ರಿ 10 ಗಂಟೆಯ ಹೊತ್ತಿಗೆ ಮೆರವಣಿಗೆ ಕೆ.ಎನ್‌.ಎಸ್‌. ಕಲ್ಯಾಣಿಗೆ ತಲುಪಿತು.

ಕಾಲ್ಟೆಕ್ಸ್ ವೃತ್ತ, ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಹೊರಪೇಟೆ ವೃತ್ತ, ಗುಂಚಿ ವೃತ್ತ, ಚರ್ಚ್ ವೃತ್ತ, ಮಂಡಿಪೇಟೆ, ಆಯಿಲ್ ಮಿಲ್ ರಸ್ತೆ, ಕೋಟೆ ಆಂಜನೇಯ ವೃತ್ತದ ಮೂಲಕ ಮೆರವಣಿಗೆ ಸಾಗಿತು. ಗಾರ್ಡನ್‌ ರಸ್ತೆಯ ಕೆ.ಎನ್.ಎಸ್. ಕಲ್ಯಾಣಿಯಲ್ಲಿ ಪೂಜೆ ನೆರವೇರಿಸಿ ಗಣೇಶನನ್ನು ವಿಸರ್ಜನೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.