ADVERTISEMENT

ಶಿರಾ | ಗಂಡು ಮಗು ಬೇಕು ಎಂಬ ಆಸೆಯಿಂದ ಜಾತ್ರೆಯಲ್ಲಿ ಬಾಲಕನ ಅಪಹರಣ: ಇಬ್ಬರು ಬಂಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:20 IST
Last Updated 10 ಫೆಬ್ರುವರಿ 2026, 5:20 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಶಿರಾ: ತಾಲ್ಲೂಕಿನ ಮಾಗೋಡು ಜಾತ್ರೆಯಲ್ಲಿ ಅಪಹರಣವಾಗಿದ್ದ ಬಾಲಕನನ್ನು ಶಿರಾ ಪೊಲೀಸರು ಬೆಂಗಳೂರಿನಲ್ಲಿ ಸೋಮವಾರ ರಕ್ಷಣೆ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿಯ ಮಾರುತಿಪುರದ ನರಸಯ್ಯ (35), ಬೆಂಗಳೂರಿನ ಕೋರಮಂಗಲದ ಶಾಂತಮೇರಿ (40) ಬಂಧಿತರು. ತಾಲ್ಲೂಕಿನ ಮುಷ್ಟಿಗರಹಳ್ಳಿ ಗ್ರಾಮದ ರಂಗಯ್ಯ, ಸೌಮ್ಯಾ ದಂಪತಿ ಪುತ್ರ ಯುವರಾಜು ಅಪಹರಣವಾಗಿದ್ದ ಬಾಲಕ. ತನ್ನ ಅಜ್ಜಿ ಮತ್ತು ತಾತನ ಜತೆಯಲ್ಲಿ ಜಾತ್ರೆಗೆ ಹೋಗಿದ್ದ. ಈ ವೇಳೆ ಆರೋಪಿಗಳು ಚಾಕೊಲೇಟ್‌ ಕೊಡಿಸುವ ಸೋಗಿನಲ್ಲಿ ಬಾಲಕನನ್ನು ಅಪಹರಣ ಮಾಡಿದ್ದರು. ಈ ಕುರಿತು ಶಿರಾ ನಗರ ಠಾಣೆಯಲ್ಲಿ‌ ಫೆ. 1ರಂದು ಪ್ರಕರಣ ದಾಖಲಾಗಿತ್ತು.

ಬಾಲಕನನ್ನು ಕೋರಮಂಗಲದಲ್ಲಿ ಇಟ್ಟುಕೊಂಡಿದ್ದರು. ಆರೋಪಿ ಶಾಂತಮೇರಿಗೆ ಗಂಡು ಮಕ್ಕಳು ಇರಲಿಲ್ಲ. ಗಂಡು ಮಗು ಬೇಕು ಎಂಬ ಆಸೆ ಹೊಂದಿದ್ದರು. ನರಸಯ್ಯ ಶಾಂತಮೇರಿಯ ದೂರದ ಸಂಬಂಧಿ. ಈತನೇ ಬಾಲಕನ ಅಪಹರಣಕ್ಕೆ ಯೋಜನೆ ರೂಪಿಸಿದ್ದರು. ಜಾತ್ರೆಯ ದಿನ ಬಾಲಕನನ್ನು ಅಪಹರಣ ಮಾಡಿದ್ದರು.

ಮಾಗೋಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಿದ್ದ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ತೆರಳಿದ ಪೊಲೀಸರ ವಿಶೇಷ ತಂಡವು ಬಾಲಕನನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿ ಕರೆತಂದಿದೆ.

‘ಆರೋಪಿಗಳು ಮಗು ಮಾರಾಟ ಮಾಡಿ ಹಣ ಸಂಪಾದಿಸುವ ಉದ್ದೇಶ ಹೊಂದಿರಲಿಲ್ಲ. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್‌ಗಳಾದ ವಿ.ಪ್ರವೀಣ್‌ ಕುಮಾರ್‌, ಡಿ.ಜಿ.ಶ್ರೀನಿವಾಸ್‌, ಪಿಎಸ್‌ಐ ರೇಣುಕಾ ಯಾದವ್‌, ಸಿಬ್ಬಂದಿ ನಾಗರಾಜು, ದುರ್ಗಯ್ಯ, ರಂಗನಾಥ್, ಭಕ್ತಕುಮಾರ್, ಹನುಮಂತರಾಯಪ್ಪ, ಕೆಂಚರಾಯಪ್ಪ, ಮಂಜುನಾಥ, ಸಿದ್ದೇಶ್, ಮಂಜುನಾಥಸ್ವಾಮಿ, ತಿಪ್ಪೇಸ್ವಾಮಿ, ಮಣಿಕಂಠ, ಮಧುಸೂಧನ್, ಗೋಪಿನಾಥ, ನಟರಾಜ ನಾಯಕ, ಶಿವಶಂಕರ್, ಸುಭಾನಲ್ಲಾ, ಮುಬಾರಕ್, ಸೌಮ್ಯಾ, ಜಯಲಕ್ಷ್ಮಿ, ಜಿಲ್ಲಾ ಪೊಲೀಸ್‌ ಕಚೇರಿ ಸಿಬ್ಬಂದಿ ನರಸಿಂಹರಾಜು, ರಮೇಶ್, ಜಗದೀಶ್, ದುಶ್ಯಂತ್‌ ಅವರ ತಂಡ ಆರೋಪಿಗಳ ಪತ್ತೆಯ ಕಾರ್ಯಾಚರಣೆ ನಡೆಸಿತ್ತು ಎಂದು ಜಿಲ್ಲಾ ಪೊಲೀಸ್‌ ವರಿ‌ಷ್ಠಾಧಿಕಾರಿ ಕೆ.ವಿ.ಅಶೋಕ್‌ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.