
ಶಿರಾ: ನಗರಸಭೆ ಅಧ್ಯಕ್ಷರ ಬದಲಾವಣೆ ಹಗ್ಗಜಗ್ಗಾಟ ತೀವ್ರಗೊಂಡಿರುವುದು ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಅಗ್ನಿಪರೀಕ್ಷೆ ಎದುರಾಗಿದೆ.
ನಗರಸಭೆ ಅಧ್ಯಕ್ಷರ ಚುನಾವಣೆಯ ಸಮಯದಲ್ಲಿ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಹಾಲಿ ಅಧ್ಯಕ್ಷ ಜೀಷಾನ್ ಮಹಮೂದ್ ಅವರು ರಾಜೀನಾಮೆ ನೀಡಿ ಮಹಮದ್ ಜಾಫರ್ ಅವರಿಗೆ ಅವಕಾಶ ಮಾಡಿಕೊಡಬೇಕಿತ್ತು. ಒಪ್ಪಂದದ ಅವಧಿ ಮುಗಿದರೂ ರಾಜೀನಾಮೆ ನೀಡದಿರುವುದು ಗೊಂದಲಕ್ಕೆ ಕಾರಣವಾಗಿದೆ.
ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಕಾರಣ ಕಾಂಗ್ರೆಸ್ ಪಕ್ಷೇತರ ಜೊತೆ ಸೇರಿ ಅಧಿಕಾರದ ಗದ್ದುಗೆ ಹಿಡಿದಿದೆ.
ನಗರಸಭೆ ಎರಡನೇ ಅವಧಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆಯ ಸೂತ್ರ ಹಣೆದು ಮೊದಲು ಅಧ್ಯಕ್ಷರಾದವರಿಗೆ ಎಂಟು ತಿಂಗಳು, ಎರಡನೇ ಬಾರಿ ಅಧ್ಯಕ್ಷರಾಗುವವರಿಗೆ 12 ತಿಂಗಳು ಹಾಗೂ ಕೊನೆಯ ಹತ್ತು ತಿಂಗಳು ಇನ್ನೊಬ್ಬರಿಗೆ ಅಧಿಕಾರ ನೀಡಲು ಶಾಸಕ ಟಿ.ಬಿ.ಜಯಚಂದ್ರ ಸಮ್ಮುಖದಲ್ಲಿ ತೀರ್ಮಾನಿಸಲಾಗಿತ್ತು.
ಅಧ್ಯಕ್ಷರ ಅವಧಿ ಸೆಪ್ಟೆಂಬರ್‌ಗೆ ಮುಗಿದರೂ ಇದುವರೆಗೂ ಹಾಲಿ ಅಧ್ಯಕರು ರಾಜೀನಾಮೆ ನೀಡಿಲ್ಲ. ಶಾಸಕ ಟಿ.ಬಿ.ಜಯಚಂದ್ರ ತಮ್ಮ ಕಳ್ಳಂಬೆಳ್ಳ ಮನೆಯ ನಿವಾಸಕ್ಕೆ ಅಧ್ಯಕ್ಷ ಜೀಷಾನ್ ಮಹಮೂದ್ ಹಾಗೂ ಸದಸ್ಯರನ್ನು ಕರೆಸಿಕೊಂಡು ರಾಜೀನಾಮೆ ನೀಡುವಂತೆ ಹೇಳಿದಾಗ ಅಧ್ಯಕ್ಷರು ಜೋರು ಧ್ವನಿಯಲ್ಲಿ ಮಾತನಾಡಿ, ‘ರಾಜೀನಾಮೆ ನೀಡುವುದಿಲ್ಲ. ನಮ್ಮ ತಂದೆ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನೀವು ನಮಗೆ ಏನು ಕೊಟ್ಟಿದ್ದೀರಿ’ ಎಂದು ಪ್ರಶ್ನೆ ಮಾಡಿ ಬಂದಿದ್ದರು. ನಂತರ ನಡೆದ ನಗರಸಭೆ ಸಾಮಾನ್ಯ ಸಭೆಗೆ ಶಾಸಕರು ಸೇರಿದಂತೆ ಕೆಲವು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಸಾಮೂಹಿಕವಾಗಿ ಗೈರಾಗುವ ಮೂಲಕ ಅಧ್ಯಕ್ಷರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದರು.
ಅಧ್ಯಕ್ಷ ಹಾಗೂ ಅವರ ಬೆಂಬಲಿಗ ಸದಸ್ಯರು ಇದರಿಂದ ಎಚ್ಚೆತ್ತು ಶಾಸಕರ ಬಳಿ ರಾಜೀನಾಮೆ ನೀಡಲು ಸ್ವಲ್ಪ ಸಮಯಾವಕಾಶ ನೀಡುವಂತೆ ಅವರ ಮನವೊಲಿಸಿ ರಾಜಿ ಮಾಡಿಕೊಂಡರು.
ನಗರಕ್ಕೆ ಇತ್ತೀಚೆಗೆ ಮೌಲಾನ ಅಜಾದ್ ಶಾಲೆ ಉದ್ಘಾಟನೆಗೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಬಂದಾಗ ಅಧ್ಯಕ್ಷರ ಬದಲಾವಣೆಗೆ ರೆಕ್ಕ ಪುಕ್ಕಗಳು ಬಂದಿತ್ತು. ಸದಸ್ಯ ಮಹಮದ್ ಜಾಫರ್ ನಿವಾಸದಲ್ಲಿ ವಸತಿ ಸಚಿವ ಜಮೀರ್ ಹಾಗೂ ಶಾಸಕ ಟಿ.ಬಿ.ಜಯಚಂದ್ರ ಕೆಲವು ನಸದಸ್ಯರ ಜೊತೆ ಅಧ್ಯಕ್ಷರ ಬದಲಾವಣೆ ಬಗ್ಗೆ ಸಭೆ ನಡೆಸಿದರು. ‘ನಾನು ಹಲವಾರು ರಾಜೀನಾಮೆ ನೀಡುವಂತೆ ಹೇಳಿದರೂ ನೀಡಿಲ್ಲ’ ಎಂದು ಶಾಸಕ ಟಿ.ಬಿ.ಜಯಚಂದ್ರ ಸಭೆಯಲ್ಲಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು. ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವಂತೆ ಅಧ್ಯಕ್ಷರಿಗೆ ಹೇಳಿ ಇಲ್ಲದಿದ್ದರೆ ಇದರ ಪರಿಣಾಮ ಮುಂದಿನ ಚುನಾವಣೆ ಮೇಲೆ ಬೀರುವ ಸಾಧ್ಯತೆ ಇದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಶಾಸಕರಿಗೆ ಕಿವಿಮಾತು ಹೇಳಿದ್ದರು.
ತಿಂಗಳೊಳಗೆ ಹಾಲಿ ಅಧ್ಯಕ್ಷರ ರಾಜೀನಾಮೆ ಪಡೆದು ಹೊಸ ಅಧ್ಯಕ್ಷರಿಗೆ ಅಧಿಕಾರ ಬಿಟ್ಟುಕೊಡುವಂತೆ ತೀರ್ಮಾನಿಸಿರುವುದಾಗಿ ಸಭೆಯಲ್ಲಿ ಹಾಜರಿದ್ದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದರು.
ಇಬ್ಬರು ಅಲ್ಪಸಂಖ್ಯಾತ ಸಮುದಾಯದವರಾಗಿದ್ದು, ಯಾರ ಪರವಾಗಿ ಮಾತನಾಡಬೇಕು ಎನ್ನುವ ಗೊಂದಲದಲ್ಲಿ ಶಾಸಕರಿದ್ದಾರೆ. ಮಹಮದ್ ಜಾಫರ್ ಅವರು ಜಾಮೀಯಾ ಮಸೀದಿ ಮುತವಲ್ಲಿಯಾಗಿದ್ದು, ಸಮುದಾಯದಲ್ಲಿ ಪ್ರಮುಖ ವ್ಯಕ್ತಿಯಾಗಿರುವುದರಿಂದ ಶಾಸಕರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.