ADVERTISEMENT

ತುಮಕೂರು ನಗರದವರೆಗೆ ಮೆಟ್ರೊ ರೈಲು ಚಿಂತನೆ: ಜಿ.‍ಪರಮೇಶ್ವರ

ತುಮಕೂರು ಸ್ಮಾರ್ಟ್ ಸಿಟಿ ಯೋಜನೆ; ಮೊದಲ ಹಂತದ ಕಾಮಗಾರಿಗೆ ಶಂಕು ಸ್ಥಾಪನೆ –ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ.ಜಿ.ಪರಮೇಶ್ವರ ಆಶಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 16:19 IST
Last Updated 15 ಡಿಸೆಂಬರ್ 2018, 16:19 IST
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿದರು. ಡಾ.ರಾಕೇಶ್‌ಕುಮಾರ್, ಡಾ.ಶಾಲಿನಿ ರಜನೀಶ್, ಪ್ರೊ. ವೈ.ಎಸ್. ಸಿದ್ದೇಗೌಡ, ಮುದ್ದಹನುಮೇಗೌಡ, ಜಿ.ಬಿ.ಜ್ಯೋತಿಗಣೇಶ್ ಇದ್ದರು
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿದರು. ಡಾ.ರಾಕೇಶ್‌ಕುಮಾರ್, ಡಾ.ಶಾಲಿನಿ ರಜನೀಶ್, ಪ್ರೊ. ವೈ.ಎಸ್. ಸಿದ್ದೇಗೌಡ, ಮುದ್ದಹನುಮೇಗೌಡ, ಜಿ.ಬಿ.ಜ್ಯೋತಿಗಣೇಶ್ ಇದ್ದರು   

ತುಮಕೂರು: ‘ತುಮಕೂರು ನಗರದವರೆಗೂ ಮೆಟ್ರೊ ರೈಲು ಸಾರಿಗೆ ವಿಸ್ತರಿಸಲು ಚಿಂತನೆ ನಡೆಸಿದ್ದು, ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಈಗಾಗಲೇ ಅವರೂ ಕಾರ್ಯೋನ್ಮುಖರಾಗಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಾ.ಜಿ.‍ಪರಮೇಶ್ವರ ಹೇಳಿದರು.

ಶನಿವಾರ ನಗರದಲ್ಲಿ ವರ್ತುಲ ರಸ್ತೆ ಜೀರ್ಣೋದ್ಧಾರ, ಸ್ಮಾರ್ಟ್ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ, ಸ್ಮಾರ್ಟ್ ಲಾಂಜ್ ಸೇರಿದಂತೆ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದ ₹ 195 ಕೋಟಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬೆಂಗಳೂರಿನ ಮೆಟ್ರೊ ರೈಲು ಈಗಾಗಲೇ ಇಂಟರ್‌ ನ್ಯಾಷನಲ್ ಎಕ್ಸಿಬಿಷನ್‌ವರೆಗೂ ವಿಸ್ತರಣೆಗೊಂಡಿದೆ. ಅಲ್ಲಿಂದ ತುಮಕೂರು ಕೇವಲ 40 ಕಿ.ಮೀ ಮಾತ್ರ. ಹೀಗಾಗಿ, ತುಮಕೂರು ನಗರ ಅಭಿವೃದ್ಧಿ ಮತ್ತು ಜನರಿಗೆ ಹೆಚ್ಚಿನ ಸಾರಿಗೆ ಅನುಕೂಲ ದೃಷ್ಟಿಯಿಂದ ತುಮಕೂರಿನವರೆಗೂ ಮೆಟ್ರೊ ರೈಲು ವಿಸ್ತರಣೆ ಮಾಡುವ ಚಿಂತನೆ ಮಾಡಲಾಗಿದೆ’ ಎಂದು ವಿವರಿಸಿದರು.

ADVERTISEMENT

ಪ್ರತಿನಿತ್ಯ ಅಂದಾಜು 50 ಸಾವಿರ ಮಂದಿ ಬೆಂಗಳೂರಿಗೆ ಸಂಚರಿಸುತ್ತಾರೆ. ಭವಿಷ್ಯದಲ್ಲಿ ಈ ಸಂಖ್ಯೆ ಹೆಚ್ಚಾಗಬಹುದು. ಇವೆಲ್ಲದರ ದೃಷ್ಟಿಯಿಂದ ಮೆಟ್ರೊ ಅಗತ್ಯವಾಗಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮಾತನಾಡಿ, ‘ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಂಡರೆ ಸಾಲದು. ಜನರ ಚಿಂತನೆ, ಹೃದಯವೂ ಸ್ಮಾರ್ಟ್ ಆಗಬೇಕು. ಸ್ಮಾರ್ಟ್‌ ಸಿಟಿಗೆ ₹ 1000 ಕೋಟಿ ಅನುದಾನದಲ್ಲಿ ಕೈಗೊಳ್ಳುವ ನಗರ ಅಭಿವೃದ್ಧಿ ₹ 10 ಸಾವಿರ ಕೋಟಿ ಆರ್ಥಿಕ ಸಂಪನ್ಮೂಲ ತಂದು ಕೊಡುವ ರೀತಿ ಇರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಿರುಕುಳಕ್ಕೆ ತಡೆ ಏಕಗವಾಕ್ಷಿ: ಮನೆ ಹಾಗೂ ಇತರೆ ಕಟ್ಟಡ ನಿರ್ಮಾಣ ಮಾಡುವವರಿಗೆ ಕಿರುಕುಳ ಆಗುವುದನ್ನು ತಡೆಯಲು ನಿಯಮ ಸರಳೀಕರಿಸುವ ಚಿಂತನೆ ನಡೆದಿದೆ. ಆನ್‌ಲೈನ್‌ನಲ್ಲಿಯೇ ಅರ್ಜಿ ಹಾಕಿದರೆ ಒಂದು ತಿಂಗಳಲ್ಲಿ ಅನುಮತಿ ನೀಡುವ ಏಕಗವಾಕ್ಷಿ ಯೋಜನೆ ಮುಂದಿನ ಒಂದು ವಾರದಲ್ಲಿ ಜಾರಿಯಾಗಲಿದೆ ಎಂದು ತಿಳಿಸಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಆಗಲು ಪರ್ಯಾಯ ನಗರವಾಗಿ ತುಮಕೂರು ಗುರುತಿಸಲ್ಪಟ್ಟಿದೆ. ಹೀಗಾಗಿ ಈ ನಗರ ಸಮಗ್ರ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆ ವರದಾನವಾಗಿದೆ. ಸಮರ್ಪಕವಾಗಿ ಅನುದಾನ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ‘ತುಮಕೂರು ನಗರ ಸ್ವಚ್ಛ ಮತ್ತು ಸುಂದರನಗರವಾಗಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಲವು ಉಪಯುಕ್ತ ಅಂಶಗಳಿವೆ. ಘನತ್ಯಾಜ್ಯ ನಿರ್ವಹಣೆ, ಆರೋಗ್ಯ, ಶಿಕ್ಷಣ, ಬೀದಿ ದೀಪ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಶಾಸಕರು, ಆಯಾ ವಾರ್ಡ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಬೇಕು. ಕಾರಣ ಅವರಿಗೆ ವಾರ್ಡಿನ ಸಮಸ್ಯೆ ಗೊತ್ತಿರುತ್ತದೆ. ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಂಪೂರ್ಣ ಸಹಕಾರ ಸಿಗುತ್ತದೆ ಎಂದು ನುಡಿದರು.

ಪುಸ್ತಕ ಬಿಡುಗಡೆ: ಡಾ.ಶಾಲಿನಿ ರಜನೀಶ್ ಹಾಗೂ ಡಾ.ರಜನೀಶ್ ಗೊಯಲ್ ಅವರು ಬರೆದ ‘ಮೇಕಿಂಗ್ ಆಫ್ ಸ್ಮಾರ್ಟ್ ಸಿಟಿ’ ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.

ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್, ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಇದ್ದರು.

ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಟಿ.ರಂಗಸ್ವಾಮಿ ಸ್ವಾಗತಿಸಿದರು. ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ.ಶಾಲಿನಿ ರಜನೀಶ್ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.