ADVERTISEMENT

ಟ್ರೇಡ್‌ ಮಾರ್ಕೆಟಿಂಗ್‌ ವಂಚನೆ: ₹12 ಲಕ್ಷ ಕಳೆದುಕೊಂಡ ಸಾಫ್ಟ್‌ವೇರ್‌ ಎಂಜಿನಿಯರ್‌

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 15:42 IST
Last Updated 31 ಮಾರ್ಚ್ 2024, 15:42 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ತುಮಕೂರು: ಟ್ರೇಡ್‌ ಮಾರ್ಕೆಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ಸ್ವಾತಿ ಡಿ.ಬರಗೂರು ಎಂಬುವರಿಗೆ ₹12 ಲಕ್ಷ ವಂಚಿಸಲಾಗಿದೆ.

ನಗರದ ಬಟವಾಡಿಯ ನಿವಾಸಿಯಾದ ಸ್ವಾತಿ ಸಾಫ್ಟ್‌ವೇರ್‌ ಎಂಜಿನಿಯರ್‌. ವಾಟ್ಸ್‌ ಆ್ಯಪ್‌ ಮುಖಾಂತರ ಮೆಸೇಜ್‌ ಮಾಡಿದ ಸೈಬರ್‌ ಕಳ್ಳರು ಟ್ರೇಡ್‌ ಮಾರ್ಕೆಟಿಂಗ್‌ನ ಲಿಂಕ್‌ ಕಳುಹಿಸಿದ್ದಾರೆ. ಪ್ರತ್ಯೇಕವಾದ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸ್ವಾತಿ ಅವರನ್ನು ಸೇರಿಸಿದ್ದಾರೆ. ನಂತರ ಮಾರ್ಕೆಟಿಂಗ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ.

ಸ್ವಾತಿ ಸೈಬರ್‌ ಕಳ್ಳರು ಹೇಳಿದ ಮಾತುಗಳನ್ನು ನಂಬಿ ಅವರು ತಿಳಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಗೂಗಲ್‌ ಪೇ ಮುಖಾಂತರ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದಾರೆ. ಮಾರ್ಚ್‌ 5 ರಿಂದ 19ರ ವರೆಗೆ ಒಟ್ಟು ₹12,05,500 ವರ್ಗಾವಣೆ ಮಾಡಿದ್ದಾರೆ. ಯಾವುದೇ ಲಾಭ ಅಥವಾ ಸ್ವಾತಿ ಹೂಡಿಕೆ ಮಾಡಿದ ಮೂಲ ಹಣ ವಾಪಸ್‌ ಹಾಕಿಲ್ಲ.

ADVERTISEMENT

ಟ್ರೇಡ್‌ ಮಾರ್ಕೆಟಿಂಗ್‌ನಲ್ಲಿ ಹಣ ಹಾಕಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಮೋಸ ಮಾಡಿದವರ ಪತ್ತೆ ಹಚ್ಚುವಂತೆ ಸ್ವಾತಿ ಸೈಬರ್‌ ಠಾಣೆಯ ಮೆಟ್ಟಿಲು ಹತ್ತಿದ್ದು, ಪ್ರಕರಣ ದಾಖಲಾಗಿದೆ.

ಕೊರಿಯರ್‌ ಹೆಸರಲ್ಲಿ ₹99 ಸಾವಿರ ಮೋಸ ಎಸ್‌.ಎಸ್‌.ಪುರಂ ನಿವಾಸಿ ಭಾಸ್ಕರ್‌ ಆಚಾರ್ಯ ಎಂಬುವರಿಗೆ ಕೊರಿಯರ್‌ ಹೆಸರಿನಲ್ಲಿ ₹99 ಸಾವಿರ ವಂಚಿಸಲಾಗಿದೆ. ಭಾಸ್ಕರ್‌ ಅವರಿಗೆ ಕರೆ ಮಾಡಿದ ವಂಚಕರು ‘ನಿಮ್ಮ ಹೆಸರಿನಲ್ಲಿ ಕೊರಿಯರ್‌ ಬಂದಿದೆ. ₹5 ಕಳುಹಿಸಿದರೆ ನಿಮಗೆ ಪಾರ್ಸಲ್‌ ತಲುಪಿಸುತ್ತೇವೆ’ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಭಾಸ್ಕರ್‌ ₹5 ವರ್ಗಾವಣೆ ಮಾಡಿದ್ದಾರೆ. ನಂತರ ಅವರ ಗಮನಕ್ಕೆ ಬಾರದೆ ಅವರ ಖಾತೆಯಿಂದ ₹99996 ಹಣ ಬೇರೆಯವರ ಅಕೌಂಟ್‌ಗೆ ವರ್ಗಾವಣೆಯಾಗಿದೆ. ಭಾಸ್ಕರ್‌ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.