ADVERTISEMENT

ಭ್ರಷ್ಟರ ಕೂಪವಾದ ಪಾಲಿಕೆ

ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 15:40 IST
Last Updated 15 ಫೆಬ್ರುವರಿ 2020, 15:40 IST
ಸೊಗಡು ಶಿವಣ್ಣ
ಸೊಗಡು ಶಿವಣ್ಣ   

ತುಮಕೂರು: ತುಮಕೂರು ಮಹಾನಗರ ಪಾಲಿಕೆ ಭ್ರಷ್ಟರ ಕೂಪವಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ದಲ್ಲಾಳಿಗಳು ಕುರಿ ಮಂದೆಯಂತೆ ತುಂಬಿರುತ್ತಾರೆ ಎಂದು ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಆರೋಪಿಸಿದರು.

‌ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಮಾರ್ಟ್‍ಸಿಟಿ ಕಾಮಗಾರಿ ಬೇಕಾಬಿಟ್ಟಿಯಾಗಿ ನಡೆಯುತ್ತಿದೆ. ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನಾಗಿ ಮಾಡಬಹುದಿತ್ತು. ಆದರೆ ಇಲ್ಲಿಯೂ ಸರಿಯಾಗಿ ಕೆಲಸ ನಡೆಯುತ್ತಿಲ್ಲ. ಹಲವು ವಾರ್ಡ್‍ಗಳು ಗಲ್ಲಿಗಳಾಗಿವೆ. ಜನರಲ್ ಕಾರಿಯಪ್ಪ ರಸ್ತೆ ಕುಲಗೆಟ್ಟಿದೆ.ಎಂಪ್ರೆಸ್ ಶಾಲೆ ಕಟ್ಟಡದಲ್ಲಿ ನೀರು ತುಂಬುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾವಗಡದ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬ ಅಮಾನತುಗೊಂಡರೆ ಅಲ್ಲಿನ ಜನರು ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಇದರಿಂದ ಆತ ಜನರಿಗೆ ಎಷ್ಟು ಕಿರುಕುಳ ನೀಡಿರಬಹುದು ಎಂಬುದು ತಿಳಿಯುತ್ತದೆ ಎಂದರು.

ADVERTISEMENT

ನಗರದ ಅಮಾನಿಕೆರೆ ಪಾರ್ಕ್‍ನಲ್ಲಿ ಯುವಕ, ಯುವತಿಯರೇ ತುಂಬಿರುತ್ತಾರೆ. ಕಾಲೇಜು ಅವಧಿಯಲ್ಲಿ ಇಲ್ಲಿಯೇ ವಾಸ್ತವ್ಯ ಹೂಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ದೇಶದ ಒಳಗಿನ ಮೀರ್ ಸಾಧಿಕ್‌ಗಳು ದೇಶದ್ರೋಹಿಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಬೀದರ್‌ನ ಶಾಹಿನ್ ಶಾಲೆಯಲ್ಲಿ ಪ್ರಧಾನಿ ಮೋದಿ ಮತ್ತು ಸಿಎಎ ವಿರುದ್ಧ ನಾಟಕ ಪ್ರದರ್ಶಿಸಿರುವುದು ಹೀನ ಕೃತ್ಯ. ಈ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿದವರನ್ನು ನೋಡಲು ಹೋದ ಸಿದ್ದರಾಮಯ್ಯನಿಗೆ ನಾಚಿಕೆ ಆಗಬೇಕು ಎಂದು ಏಕವಚನದಲ್ಲಿ ಹರಿಹಾಯ್ದರು.

ಗೋಷ್ಠಿಯಲ್ಲಿ ಕೆ.ಪಿ.ಮಹೇಶ್, ಎಂ.ಬಿ.ನಂದೀಶ್, ಗರುಡಯ್ಯ, ಬನಶಂಕರಿ ಬಾಬು, ಕೆ.ಹರೀಶ್, ದಯಾನಂದ್, ಮದನ್‌ಸಿಂಗ್, ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.