
ಹುಳಿಯಾರು: ಪಟ್ಟಣ ಪಂಚಾಯಿತಿಯಿಂದ ಹೋಬಳಿಯ ಮೇಲನಹಳ್ಳಿ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕ ಅವಕಾಶ ಕೊಡುವುದಿಲ್ಲ ಎಂದು ಗ್ರಾಮಸ್ಥರು ಮಂಗಳವಾರ ವಿರೋಧ ವ್ಯಕ್ತಪಡಿಸಿದರು.
ಹುಳಿಯಾರು ಪಟ್ಟಣದ ಕಸದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈಗಾಗಲೇ ಐದಾರು ಕಡೆ ಘಟಕ ಸ್ಥಾಪಿಸಲು ಅಧಿಕಾರಿಗಳು ಸ್ಥಳ ಗುರುತಿಸಿದ್ದಾರೆ. ಎಲ್ಲ ಕಡೆಯೂ ಆಯಾಯ ಗ್ರಾಮಸ್ಥರ ವಿರೋಧದಿಂದ ಘಟಕ ಸ್ಥಾಪನೆ ಆಗುತ್ತಿಲ್ಲ. ಈ ನಡುವೆ ಹೋಬಳಿಯ ಗಡಿ ಭಾಗವಾದ ಮೇಲನಹಳ್ಳಿ ಗ್ರಾಮದ ಸರ್ಕಾರಿ ಸರ್ವೆ ನಂಬರ್ 69 ರಲ್ಲಿ ಕಂದಾಯ ಅಧಿಕಾರಿಗಳು ಸ್ಥಳ ಗುರುತು ಮಾಡಿದ್ದರು.
ಗೋಮಾಳ ಜಾಗವಾಗಿದ್ದು ರೈತರು ಉಳುಮೆ ಮಾಡದ ಕಾರಣ ರೈತರು ಹಾಕಿದ್ದ ಅರ್ಜಿಯನ್ನು ಉಪವಿಭಾಗಾಧಿಕಾರಿ ವಜಾಗೊಳಿಸಿದ್ದರು. ಮಂಗಳವಾರ ಕಂದಾಯ ಅಧಿಕಾರಿಗಳು ಸ್ಥಳ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಯಾವುದೇ ಕಾರಣಕ್ಕೂ ಘಟಕ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.
ಘಟಕ ಸ್ಥಾಪನೆಯಿಂದ ಜನ-ಜಾನುವಾರುಗಳಿಗೆ ತೊಂದರೆ ಆಗುತ್ತದೆ. ಅಲ್ಲದೆ ಈ ಜಾಗ ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಪ್ರಾಣಿ-ಪಕ್ಷಿಗಳಿಗೂ ತೊಂದರೆ ಆಗುತ್ತದೆ. ಅಲ್ಲದೆ ಸುಮಾರು 25 ಕೀ.ಮೀ ದೂರದಲ್ಲಿ ಘಟಕ ಸ್ಥಾಪನೆಯಿಂದ ಅಧಿಕ ಸಾಗಾಣಿಕೆ ವೆಚ್ಚವೂ ತಗುಲುತ್ತದೆ ಎಂದರು. ಗ್ರಾಮದಲ್ಲಿ ಸಭೆ ನಡೆಸಿ ಘಟಕ ಸ್ಥಾಪನೆಗೆ ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಹನುಮಂತರಾಜು, ಮೋಹನ್, ಲಿಂಗರಾಜು, ನಾಗರಾಜು ಸೇರಿದಂತೆ ವಿವಿಧ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.