ADVERTISEMENT

ಚುನಾವಣೆ ಬಳಿಕ ತುಮಕೂರಲ್ಲಿ ಕಾಂಗ್ರೆಸ್ ಮಾಯ; ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 2 ಮೇ 2019, 10:53 IST
Last Updated 2 ಮೇ 2019, 10:53 IST
ಎಸ್‌.ಐ.ಟಿ ಕ್ಯಾಂಪಸ್‌ನಲ್ಲಿ ಗುರುವಾರ ಬೆಳಿಗ್ಗೆ ವಾಯುವಿಹಾರಕ್ಕೆ ಬಂದವರಿಗೆ ಬಿಜೆಪಿ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಅವರು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಪರ ಮತಯಾಚನೆ ಮಾಡಿದರು
ಎಸ್‌.ಐ.ಟಿ ಕ್ಯಾಂಪಸ್‌ನಲ್ಲಿ ಗುರುವಾರ ಬೆಳಿಗ್ಗೆ ವಾಯುವಿಹಾರಕ್ಕೆ ಬಂದವರಿಗೆ ಬಿಜೆಪಿ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಅವರು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಪರ ಮತಯಾಚನೆ ಮಾಡಿದರು   

ತುಮಕೂರು:'ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಪಕ್ಷ ಸಂಪೂರ್ಣ ಮಾಯವಾಗಲಿದೆ’ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.

ನಗರದ ಸಿದ್ದಗಂಗಾ ಮಠಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ಪಿ ಸೂರ್ಯ ಅವರೊಂದಿಗೆ ಇಂದು ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

’ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯೇ ಇಲ್ಲ. ಹೀಗಿರುವಾಗ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕುವುದಿರಲಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಬೇರುಗಳೇ ಇರುವುದಿಲ್ಲ’ ಎಂದು ಕುಟುಕಿದರು.

ADVERTISEMENT

‘ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಬಿಜೆಪಿ ಬಗ್ಗೆ ಮಾತನಾಡುವ ಮುನ್ನ ತಮ್ಮ ಪಕ್ಷದ ಸ್ಥಿತಿಗತಿ ಏನಾಗಿದೆ ಎಂಬುದನ್ನು ಒಮ್ಮೆ ಅವಲೋಕಿಸಿ ನೋಡಲಿ’ ಎಂದರು.

’ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲದಂತಾಗಿದೆ. ಚುನಾವಣೆಯ ಹೊಸ್ತಿಲಲ್ಲಿದ್ದರೂ ಇನ್ನು ಯಾರು ಪ್ರಧಾನಿ ಅಭ್ಯರ್ಥಿ ಎಂಬ ಗೊಂದಲವೇ ಬಗೆಹರಿದಿಲ್ಲ. ಆದರೆ, ನಮ್ಮ ಪಕ್ಷದಲ್ಲಿ ಮೋದಿಯವರೇ ಯಜಮಾನ. ಅವರೇ ನಮ್ಮ ಮುಂದಿನ ಪ್ರಧಾನಿ’ ಎಂದರು.

‘ಪ್ರಧಾನಿ ನರೇಂದ್ರ ಮೋದಿಯವರು ಪುಲ್ವಾಮಾ ಘಟನೆಯಾದ ಕೇವಲ 15 ದಿನದಲ್ಲಿ ಭಾರತೀಯರ ಬುದ್ಧಿವಂತಿಕೆ, ತಾಕತ್ತು ಏನೆಂದು ಇಡೀ ಜಗತ್ತಿದೆ ತೋರಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿಶ್ವದ ಎಲ್ಲ ರಾಷ್ಟ್ರಗಳಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಇಂಥ ಧೀಮಂತ ನಾಯಕ ಮತ್ತೆ ಪ್ರಧಾನಿಯಾಗಬೇಕು ಎಂಬುದು ಇಡೀ ದೇಶದ ಜನರ ಒತ್ತಾಸೆಯಾಗಿದೆ’ ಎಂದರು.

‘ಬೆಂಗಳೂರು ದಕ್ಷಿಣ, ತುಮಕೂರು ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಹರ್ಷವರ್ಧನಗೌಡ, ಅರುಣ್ ಸೋಮಣ್ಣ, ಕೊಪ್ಪಲ್ ನಾಗರಾಜು, ಹೆಬ್ಬಾಕ ರವಿಶಂಕರ್, ಮಲ್ಲಿಕಾರ್ಜುನಯ್ಯ, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.