ತುಮಕೂರು: ಬಿತ್ತನೆ ಬೀಜ, ಕೃಷಿ ಉಪಕರಣಗಳ ದರಪಟ್ಟಿಯನ್ನು ರೈತ ಸಂಪರ್ಕ ಕೇಂದ್ರ, ಬೀಜ ಮಾರಾಟ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ, ದಾಸ್ತಾನಿಗೆ ಸಂಬಂಧಿಸಿದಂತೆ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ನಿಗದಿಪಡಿಸಿದ ದರದಲ್ಲೇ ಬಿತ್ತನೆ ಬೀಜ ಮಾರಾಟ ಮಾಡಬೇಕು. ಮೇ 20ರಿಂದ ಬಿತ್ತನೆ ಬೀಜ ವಿತರಣೆ ಪ್ರಾರಂಭಿಸುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಗುಣಮಟ್ಟದ ಬೀಜ ಒದಗಿಸುವ ದೃಷ್ಟಿಯಿಂದ ವಿತರಣೆಗೆ ಮುನ್ನ ಪ್ರತಿಯೊಂದು ಕೇಂದ್ರದಲ್ಲಿಯೂ ಬೀಜದ ತಳಿ ಹಾಗೂ ಪ್ರತಿ ಲಾಟ್‍ನಿಂದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಬೇಕು. ಗುಣಮಟ್ಟ ಖಚಿತಪಡಿಸಿಕೊಂಡ ನಂತರ ವಿತರಣೆ ಮಾಡಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ‘ಬಿತ್ತನೆ ಬೀಜ ಮಾರಾಟ ಮಾಡಲು ಜಿಲ್ಲೆಯಲ್ಲಿ 50 ರೈತ ಸಂಪರ್ಕ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 12 ಮಾರಾಟ ಕೇಂದ್ರಗಳನ್ನು ತೆರೆಯಲಾಗುವುದು’ ಎಂದರು.
ಗುಬ್ಬಿ ತಾಲ್ಲೂಕಿನ ಚೇಳೂರು, ಮಧುಗಿರಿ ಕಸಬಾ, ಕೊಡಿಗೇನಹಳ್ಳಿ, ಪಾವಗಡ ತಾಲ್ಲೂಕು ಕಸಬಾ ಎಪಿಎಂಸಿ, ನಾಗಲಮಡಿಕೆ, ವೈ.ಎನ್.ಹೊಸಕೋಟೆ, ಲಿಂಗದಹಳ್ಳಿ, ಮಂಗಳವಾಡ, ಶಿರಾ ಎಪಿಎಂಸಿ, ತಾವರೆಕೆರೆ, ಪಟ್ಟನಾಯಕನಹಳ್ಳಿ, ಹುಲಿಕುಂಟೆಯಲ್ಲಿ ಹೆಚ್ಚುವರಿ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.
ರೈತ ಮುಖಂಡ ಆರಾಧ್ಯ, ‘ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ರೈತರಿಗೆ ಬ್ಯಾಂಕುಗಳಲ್ಲಿ ತ್ವರಿತವಾಗಿ ಸಾಲ ಲಭ್ಯವಾಗದೆ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಮೊರೆ ಹೋಗಬೇಕಾಗಿದೆ. ರೈತರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಶಾರದಮ್ಮ, ಕೃಷಿ ಇಲಾಖೆ ಉಪನಿರ್ದೇಶಕರಾದ ಹುಲಿರಾಜ್, ಎಚ್.ಎಲ್.ಚಂದ್ರಕುಮಾರ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.