
ಹುಳಿಯಾರು: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಹೊಸ ವರ್ಷದ ಪ್ರಯುಕ್ತ ವಾಸವಿ ಯುವಜನ ಸಂಘದಿಂದ ಭಾನುವಾರ ನಡೆದ ವಿಶೇಷ ಆಹಾರ ಮೇಳ–2026 ತಿಂಡಿ ಪ್ರಿಯರ ಮನಗೆದ್ದಿತು. ಚುಮುಚುಮು ಚಳಿ ನಡುವೆ ಬಿಸಿಬಿಸಿ ಖಾದ್ಯಗಳ ಸವಿಯಲು ನೂರಾರು ಜನ ಬಂದಿದ್ದರು.
ಒಟ್ಟು 11 ಮಳಿಗೆಗಳಿದ್ದು, ಒಂದೊಂದು ಮಳಿಗೆಯಲ್ಲೂ ಒಂದೊಂದು ವಿಭಿನ್ನ ತಿಂಡಿ ತಿನಿಸುಗಳನ್ನು ತಯಾರಿಸುವ ವ್ಯವಸ್ಥೆ ಮಾಡಲಾಗಿತ್ತು. ಒಂದು ಸ್ಟಾಲ್‌ನಲ್ಲಿ ತಯಾರಿಸಿದ ತಿಂಡಿಯನ್ನು ಮತ್ತೊಂದು ಸ್ಟಾಲ್‌ನಲ್ಲಿ ಮಾಡುವಂತಿರಲಿಲ್ಲ ಎಂಬ ನಿಯಮದಿಂದಾಗಿ, ಮೇಳಕ್ಕೆ ಬಂದವರಿಗೆ ನಾನಾ ಬಗೆಯ ಹೊಸ ಹೊಸ ರುಚಿಗಳನ್ನು ಸವಿಯುವ ಅವಕಾಶ ದೊರೆಯಿತು. ಟೋಕನ್ ಮೂಲಕ ಸಾರ್ವಜನಿಕರಿಗೆ ತಮ್ಮಿಷ್ಟದ ಖಾದ್ಯಗಳನ್ನು ಸುಲಭವಾಗಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಚಳಿಗಾಲದ ವಾತಾವರಣದಲ್ಲಿ ಬಿಸಿ ಬಿಸಿ ತಿಂಡಿಗಳು ಮೇಳ ಆಕರ್ಷಣೆಯಾಗಿತ್ತು. ನೂರಾರು ಮಂದಿ ಕುಟುಂಬ ಸಮೇತವಾಗಿ ಮೇಳಕ್ಕೆ ಬಂದಿದ್ದರು. ತಿಂಡಿ ತಯಾರಿಕೆಯಲ್ಲಿ ಮಹಿಳೆಯರು ತಮ್ಮ ಕೈಚಳಕ, ನೈಪುಣ್ಯ ಮತ್ತು ಸಾಂಪ್ರದಾಯಿಕ ರುಚಿ ಪ್ರದರ್ಶಿಸಿದರು. 11 ಕೌಂಟರ್‌ಗಳಲ್ಲಿ 50ಕ್ಕೂ ಹೆಚ್ಚು ವೈವಿಧ್ಯಮಯ ತಿಂಡಿ ತಿನಿಸು ಲಭ್ಯವಿದ್ದವು.
ಮೇಳದಲ್ಲಿ ಅವರೆ ಬೇಳೆ ವಡೆ, ಅವರೆ ಬೇಳೆ ರೊಟ್ಟಿ, ಪಾನಿಪುರಿ, ಟಿಕ್ಕಿ ಪುರಿ, ಮಸಾಲೆ ಪುರಿ, ಮಂಚೂರಿ, ಬದನೆಕಾಯಿ–ಮೆಣಸಿನಕಾಯಿ–ಕ್ಯಾಪ್ಸಿಕಂ ಮಸಾಲೆ ಬೋಂಡಾ, ಮಶ್ರೂಮ್ ಬೋಂಡ, ಕಚೋರಿ, ಮಂಗಳೂರು ಬಜ್ಜಿ, ಸಬ್ಬಕ್ಕಿ ಉಪ್ಪಿಟ್ಟು, ಚಿರುಮುರಿ, ಗಿರ್ಮಿಟ್, ಹೋಂಮೇಡ್ ಚಾಕೊಲೇಟ್, ಅಗಸೆ ಬೀಜದ ಉಂಡೆ, ಪಾವ್ ಬಾಜಿ, ಮಡಕೆ ಕಾಳು ಉಸುಲಿ, ಅಲಸಂದೆ ಕಾಳು ವಡೆ, ನಿಪ್ಪಟ್ಟು ಮಸಾಲ, ಬಂಗಾರಪೇಟೆ ಪಾನಿಪುರಿ, ಹೆಸರುಬೇಳೆ ಕಾಂಗ್ರೆಸ್ ಪಾಪುಡಿ ಮಸಾಲೆ, ದಮ್ ಬಿರಿಯಾನಿ, ಸ್ಪೆಷಲ್ ಪಿಜ್ಜಾ ಸೇರಿದಂತೆ ಅನೇಕ ಬಗೆಯ ಸ್ಥಳೀಯ ಹಾಗೂ ಸಾಂಪ್ರದಾಯಿಕ ತಿಂಡಿ ತಿನಿಸುಗಳು ಜನರನ್ನು ಸೆಳೆದವು.
ಅತ್ಯಧಿಕ ಮಾರಾಟವಾದ ಸ್ಟಾಲ್‌ಗೆ ಬಹುಮಾನ ನೀಡಲಾಯಿತು.
ವಾಸವಿ ಯುವಜನ ಸಂಘದ ಅಧ್ಯಕ್ಷ ಟಿ.ಆರ್. ಮನೋಜ್, ಕಾರ್ಯದರ್ಶಿ ದುರ್ಗಾ ಪ್ರಸಾದ್, ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.