ADVERTISEMENT

ತುರುವೇಕೆರೆ: ಬೇಟೆರಾಯಸ್ವಾಮಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 10:05 IST
Last Updated 7 ಮಾರ್ಚ್ 2023, 10:05 IST
ಇತಿಹಾಸ ಪ್ರಸಿದ್ಧ ಬೇಟೆರಾಯ ಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು
ಇತಿಹಾಸ ಪ್ರಸಿದ್ಧ ಬೇಟೆರಾಯ ಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು   

ತುರುವೇಕೆರೆ: ಇಲ್ಲಿನ ಇತಿಹಾಸ ಪ್ರಸಿದ್ಧ ಬೇಟೆರಾಯ ಸ್ವಾಮಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆಯಿಂದಲೇ ಬೇಟೆರಾಯಸ್ವಾಮಿ ಮೂಲ ದೇವರಿಗೆ ಪಂಚಾಮೃತ, ಕ್ಷೀರಾಭಿಷೇಕ ಸೇರಿದಂತೆ ದೇವಾಲಯದಲ್ಲಿ ಅನೇಕ ಪೂಜಾ ಕೈಂಕರ್ಯ ನೆರವೇರಿದವು. ಭಕ್ತಾದಿಗಳು ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಮಧ್ಯಾಹ್ನ ಬೇಟೆರಾಯಸ್ವಾಮಿ ಯನ್ನು ರಥದಲ್ಲಿ ಕುಳ್ಳರಿಸಿ ಎಡೆ ನೈವೇದ್ಯ ನೀಡಿದ ನಂತರ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಆಕಾಶದಲ್ಲಿ ಗರುಡ ದರ್ಶನ ನೀಡುತ್ತಿದ್ದಂತೆ ನೆರೆದಿದ್ದ ಅಪಾರ ಭಕ್ತರು ಬೇಟೆರಾಯಸ್ವಾಮಿ ಗೋವಿಂದ ನಾಮ ಸ್ಮರಣೆ ಮಾಡುತ್ತಾ ಜೈಘೋಷ ಕೂಗುತ್ತಾ ರಥವನ್ನು ಉತ್ಸಾಹದಿಂದ ಎಳೆದರು.

ADVERTISEMENT

ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಭಕ್ತಿಭಾವದಿಂದ ರಥಕ್ಕೆ ಬಾಳೆಹಣ್ಣು, ಧವನ ತೂರಿದರು. ಜನರಿಗೆ ಪಾನಕ, ಫಲಹಾರ, ಮಜ್ಜಿಗೆ, ಬೂಂದಿ-ಪಾಯಸ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಬಿರು ಬಿಸಿಲಿನ ಝಳ ಲೆಕ್ಕಿಸದೆ ಭಕ್ತರು ಉತ್ಸಾಹದಿಂದ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ವಿವಿಧ ಮಹಿಳಾ ತಂಡದವರು ಕೋಲಾಟ ಪ್ರದರ್ಶನ, ಸಂಗೀತ ಸುಧೆ ಹರಿಸಿದರು.

ರಥೋತ್ಸವದಲ್ಲಿ ಶಾಸಕ ಮಸಾಲ ಜಯರಾಂ, ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ, ತಹಶೀಲ್ದಾರ್ ವೈ.ಎಂ. ರೇಣುಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಪ್ರಭಾಕರ್, ಸದಸ್ಯರಾದ ಚಿದಾನಂದ್, ಅಂಜನ್ ಕುಮಾರ್, ಆಶಾ, ಭಾಗ್ಯ, ರಥೋತ್ಸವ ಕಮಿಟಿ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.