ADVERTISEMENT

ಮೊಬೈಲ್‌ ಸದ್ಬಳಕೆ ಮಾಡಿಕೊಂಡೆ: ಗೌರವ್ ಬಾಬು 

​ಪ್ರಜಾವಾಣಿ ವಾರ್ತೆ
Published 1 ಮೇ 2019, 11:37 IST
Last Updated 1 ಮೇ 2019, 11:37 IST
ಎಚ್.ಎಸ್. ಗೌರವ ಬಾಬು
ಎಚ್.ಎಸ್. ಗೌರವ ಬಾಬು   

‘ನನ್ನ ಪರಿಶ್ರಮ ಹಾಗೂ ಶಾಲೆ ಶಿಕ್ಷಕರು, ತಂದೆ – ತಾಯಿಯ ಕಾಳಜಿ ನನಗೆ ಹೆಚ್ಚು ಅಂಕ ಬರಲು ಸಾಧ್ಯವಾಯಿತು’– ಇದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಚಾಣಕ್ಯ ಪಬ್ಲಿಕ್ ಶಾಲೆ ವಿದ್ಯಾರ್ಥಿ ಹುಲಿಕುಂಟೆ ಗ್ರಾಮದ ಎಸ್.ಎಸ್.ಗೌರವ್‌ ಬಾಬು ಅವರ ಮಾತು.

‘ತಂದೆ ಶಿವಕುಮಾರ್ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕ. ತಾಯಿ ವಿಜಯರತ್ನ ಬಡವನಹಳ್ಳಿ ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದಾರೆ. ತಂದೆ– ತಾಯಿ ಶಿಕ್ಷಕರಾಗಿದ್ದರೂ ನನಗೆ ಒಂದು ದಿನವೂ ಓದಲು ಒತ್ತಡ ಹೇರಲಿಲ್ಲ. ಪ್ರತಿ ದಿನ 4 ಗಂಟೆ ನಿರಂತರ ಸಭ್ಯಾಸ ಮಾಡುತ್ತಿದ್ದೆ. ಇದರೊಂದಿಗೆ ಹಳೆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವ ಅಭ್ಯಾಸ ಮಾಡಿದ್ದರಿಂದ ನನಗೆ ಪರೀಕ್ಷೆ ಸುಲಭ ಎನಿಸಿತು’ ಎನ್ನುವರು ಗೌರವ್‌.

ಇದರೊಂದಿಗೆ ಮೊಬೈಲ್‌ನ್ನು ಸದ್ಬಳಕೆ ಮಾಡಿಕೊಂಡೆ. ಅದರಲ್ಲಿ ಇಂಟರ್ನೆಟ್ ಮೂಲಕ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಹಲವು ಟ್ರಸ್ಟ್ ಹಾಗೂ ಸ್ಟಡಿ ಸೆಂಟರ್‌ಗಳು ಹಾಕುತ್ತಿದ್ದರು. ಅದನ್ನು ಹೆಚ್ಚು ಗಮನಿಸುತ್ತಿದ್ದೆ. ಇದೂ ಕೂಡ ನನಗೆ ಅನುಕೂಲವಾಯಿತು. ಮುಂದೆ ಬಿಇ ಮಾಡಿ ಐಎಎಸ್ ಮಾಡುವ ಕನಸಿದೆ ಎಂದು ಹೇಳಿದರು.

ADVERTISEMENT

ಒತ್ತಡ ಹಾಕಲಿಲ್ಲ: ‘ನಾವಿಬ್ಬರೂ ಶಿಕ್ಷಕರಾದರೂ ಅವನ್ನನ್ನು ಓದಲು ಎಂದೂ ಒತ್ತಾಯ ಮಾಡಲಿಲ್ಲ. ಅವನ ಇಷ್ಟದಂತೆ ಓದುವುದಕ್ಕೆ ಪ್ರೋತ್ಸಾಹ ತುಂಬಿದೆವು. ನಾವು ಒತ್ತಡ ಹೇರಿದ್ದರೆ ಬಹುಶಃ ಇಷ್ಟು ಅಂಕ ಬರುತ್ತಿರಲಿಲ್ಲವೇನೋ. ಓದಲು ಮೊಬೈಲ್ ಅತಿ ಹೆಚ್ಚು ಬಳಸುತ್ತಿದ್ದ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳನ್ನು ಅತಿ ಹೆಚ್ಚು ಹುಡುಕುತ್ತಿದ್ದ. ಅದು ಅವನಿಗೆ ಅನುಕೂಲವಾಯಿತು. ಈಗ ಮಗ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದು ಶಿಕ್ಷಕರಾಗಿರುವ ನಮಗೆ ಹೆಮ್ಮೆ ಎನಿಸಿದೆ’ ಎನ್ನುತ್ತಾರೆ ಗೌರವ್ ಅವರ ತಂದೆ ಶಿವಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.