ಶಿರಾ: ಪ್ರಾದೇಶಿಕ ಪಕ್ಷ ಉಳಿದರೆ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಹಾಗಾಗಿ ಮತದಾರರು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರನ್ನು ಗೆಲ್ಲಿಸಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮನವಿ ಮಾಡಿದರು.
ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಎರಡು ರಾಷ್ಟೀಯ ಪಕ್ಷಗಳು ಸುಖಾಸುಮ್ಮನೆ ಪ್ರಾದೇಶಿಕ ಪಕ್ಷವನ್ನು ಕೆಡವಲು ಹೊರಟಿವೆ. ಆದರೆ ಜನರು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎನ್ನುವ ನಂಬಿಕೆ ನನಗೆ ಇದೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ಜನ ಪ್ರಾದೇಶಿಕ ಪಕ್ಷಗಳ ಜೊತೆ ಇದ್ದಾರೆ. ಅದಕ್ಕೆ ಕೇಂದ್ರದಲ್ಲಿ ಯಾವುದೇ ಸರ್ಕಾರಗಳು ಬಂದರು ಈ ಮೂರು ರಾಜ್ಯಗಳ ಪ್ರಾದೇಶಿಕ ಪಕ್ಷದ ನಾಯಕರ ಮನೆ ಮುಂದೆ ಬಂದು ನಿಲ್ಲುತ್ತಾರೆ. ನೀವು ನಮಗೆ ಶಕ್ತಿ ನೀಡಿದರೆ ರಾಷ್ಟ್ರೀಯ ಪಕ್ಷಗಳು ನಿಮ್ಮ ಮನೆ ಬಾಗಿಲಿಗೆ ಬರುವಂತೆ ಮಾಡುತ್ತೇವೆ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪಾಪದ ಹಣದಿಂದ ಶಿರಾ ಕ್ಷೇತ್ರವನ್ನು ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆದರೆ ಇಲ್ಲಿನ ಮತದಾರರನ್ನು ಹಣದಿಂದ ಖರೀದಿ ಮಾಡಲು ಸಾಧ್ಯವಿಲ್ಲ ಎಂದರು.
ಸಭೆ ನಡೆಯುತ್ತಿದ್ದಾಗ ಮಳೆ ಬಂದರೂ ಜನರು ಮಳೆಯಲ್ಲಿ ನಿಂತು ಭಾಷಣ ಕೇಳಿದರು.
ಜೆಡಿಎಸ್ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಗೌರಿಶಂಕರ್, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ಮುಖಂಡ ವೈಎಸ್‌ವಿ ದತ್ತ, ಅಭ್ಯರ್ಥಿ ಅಮ್ಮಾಜಮ್ಮ, ಜಿ.ಪಂ ಸದಸ್ಯ ಎಸ್.ರಾಮಕೃಷ್ಣ, ಸಿ.ಆರ್.ಉಮೇಶ್, ಬಿ.ಎಸ್.ಸತ್ಯಪ್ರಕಾಶ್, ಮುಡಿಮಡು ರಂಗಶ್ವಾಮಯ್ಯ, ಲಿಂಗದಹಳ್ಳಿ ಚೇತನಕುಮಾರ್, ಎಚ್.ಎಸ್.ಮೂಡಲಗಿರಿಯಪ್ಪ, ಟಿ.ಡಿ.ಮಲ್ಲೇಶ್, ಕೋಟೆ ಮಹದೇವ್, ಸೀಗಲಹಳ್ಳಿ ವೀರೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.