ಮಧುಗಿರಿ: ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಾ ಸಾಗುತ್ತಿದೆ. ಆದರೆ ಬೆಳವಣಿಗೆಗೆ ತಕ್ಕಂತೆ ಉತ್ತಮ ರೀತಿಯ ಚರಂಡಿ ವ್ಯವಸ್ಥೆ ಇಲ್ಲದೇ ಪಟ್ಟಣದ ಸೌಂದರ್ಯವೂ ಇಲ್ಲದಂತಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ದೊಡ್ಡ ಚರಂಡಿ ಇರುವ ಮನೆಯ ನಿವಾಸಿಗಳ ಪಾಡಂತೂ ಹೇಳತೀರದಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ಕೆಲವು ವಾರ್ಡ್‌ಗಳಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ಬಂದಾಗ ಚರಂಡಿಯಲ್ಲಿ ಹರಿಯಬೇಕಿದ್ದ ಕೊಳಕು ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತದೆ. ಗೃಹೋಪಯೋಗಿ ವಸ್ತುಗಳು ಕೂಡ ಕೊಳಕು ನೀರು ಪಾಲಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಿಲ್ಲ ಎಂದು ನಿವಾಸಿಗಳು ದೂರುತ್ತಾರೆ.
ಪಟ್ಟಣದ ಬಹುತೇಕ ಚರಂಡಿಗಳು ಅಂಗಡಿ ಮತ್ತು ಮನೆಯ ಮಾಲೀಕರಿಂದ ಒತ್ತುವರಿಯಾಗಿವೆ. ಕೆಲವರಂತೂ ಚರಂಡಿಯನ್ನು ಸಿಮೆಂಟ್ ಕಾಂಕ್ರೀಟ್‌ನಿಂದ ಮುಚ್ಚಿರುವುದರಿಂದ ಪುರಸಭೆಯ ಪೌರ ಕಾರ್ಮಿಕರು ಸ್ವಚ್ಛತೆ ಮಾಡಿಕೊಳ್ಳಲು ಆಗದೇ ಇರುವುದರಿಂದ ಕಸ, ಕೊಳಕು ಮತ್ತು ಕಡ್ಡಿಗಳು ಸೇರಿಕೊಂಡು ನೀರು ಸರಾಗವಾಗಿ ಹರಿಯದೇ ಚರಂಡಿ ಗಬ್ಬು ವಾಸನೆಯಿಂದ ಕೂಡಿದೆ.
ರಾಜಕಾಲುವೆ ಚರಂಡಿ ಹಾಗೂ ದೊಡ್ಡ ಚರಂಡಿಗಳನ್ನು ಸ್ವಚ್ಛಮಾಡಿ ಅದೆಷ್ಟೋ ವರ್ಷಗಳು ಕಳೆದಿವೆ. ಪುರಸಭೆ ಕಚೇರಿ ಮುಂಭಾಗದಲ್ಲಿರುವ ದೊಡ್ಡ ಚರಂಡಿ ಸಂಪೂರ್ಣವಾಗಿ ಕಸ, ಕಡ್ಡಿ, ಹೂಳಿನಿಂದ ತುಂಬಿಕೊಂಡಿದೆ.
ಜೋರಾಗಿ ಮಳೆ ಬಂದರೆ ಸಾಕು ಚರಂಡಿಯಲ್ಲಿ ಹರಿಯಬೇಕಿದ್ದ ನೀರು ಪುರಸಭೆ ಆವರಣದಲ್ಲಿರುವ ಉದ್ಯಾನಕ್ಕೆ ಹರಿಯುತ್ತವೆ. ಚರಂಡಿಯ ಮೇಲೆ ಅಕ್ರಮವಾಗಿ ನಿರ್ಮಿಸಿರುವ ಅಂಗಡಿಗಳನ್ನು ತೆರವುಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದ ರಸ್ತೆಯ ಮೇಲೆ ಬಿದ್ದ ನೀರು ಚರಂಡಿಗೆ ಹರಿಯದೇ ರಸ್ತೆಯ ಮೇಲೆ ಒಂದು ಕಿ.ಮೀ ದೂರದ ನೃಪತುಂಗ ವೃತ್ತದವರೆಗೂ ಹರಿಯುತ್ತದೆ. ಇದರಿಂದ ರಸ್ತೆಗೆ ಹಾಕಿರುವ ಡಾಂಬರೀಕರಣ ಸಂಪೂರ್ಣವಾಗಿ ಹಾಳಾಗಿ ಗುಂಡಿ ನಿರ್ಮಾಣಗೊಂಡು ವಾಹನ ಸಂಚಾರ ಮಾಡುವವರಿಗೆ ಹಾಗೂ ಪಾದಚಾರಿಗಳಿಗೆ ಸಾಕಷ್ಟು ತೊಂದರೆಯಾಗುತ್ತದೆ.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ನೀರು ರಸ್ತೆಯ ಮೇಲೆ ನಿಲ್ಲುತ್ತಿರುವುದರಿಂದ ವಾಹನ ಮತ್ತು ಪಾದಚಾರಿಗಳಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಪಾದಚಾರಿಗಳು ದೂರಿದರು.
ಚರಂಡಿಯಲ್ಲಿ ಭಾರೀ ಪ್ರಮಾಣದ ಮಣ್ಣು ತುಂಬಿ ಮುಚ್ಚಿ ಹೋಗಿದೆ. ಕೊಳಚೆ ನೀರು ಮುಂದಕ್ಕೆ ಹರಿದು ಹೋಗುತ್ತಿಲ್ಲ. ಕಳೆದ ಕೆಲ ತಿಂಗಳುಗಳಿಂದ ಈ ದುಃಸ್ಥಿತಿಯಿದೆ.
ಪಟ್ಟಣದ ಬಹುತೇಕ ವಾರ್ಡ್‌ಗಳಿಂದ ಹರಿದು ಬರುವ ಚರಂಡಿ ನೀರು 17ನೇ ವಾರ್ಡ್‌ನಲ್ಲಿ ಕೊನೆಗೊಳ್ಳುತ್ತದೆ. ಪಟ್ಟಣದಲ್ಲಿರುವ ರಾಯಗಾಲುವೆ ಮತ್ತು ದೊಡ್ಡ ಚರಂಡಿಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ಸ್ವಚ್ಛತೆ ಮಾಡಿಸುವ ಕೆಲಸವನ್ನು ಮಾಡಿದರೆ, ರೋಗರುಜಿನ ದೂರವಾಗುತ್ತವೆ. ಇಲ್ಲವಾದರೆ ಡೆಂಗಿ, ಮಲೇರಿಯಾ ಸೇರಿದಂತೆ ಹಲವು ರೋಗ ಜನರನ್ನು ಕಾಡತೊಡಗುತ್ತದೆ. ಈ ವಿಚಾರವನ್ನು ಪುರಸಭೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ನಿವಾಸಿಗಳು ಒತ್ತಾಯಿಸಿದರು.
ಪಟ್ಟಣದ ರಸ್ತೆ, ಚರಂಡಿ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ₹25 ಕೋಟಿ ವಿಶೇಷ ಅನುದಾನ ತಂದಿದ್ದಾರೆ. ಈ ಅನುದಾನದಲ್ಲಿ ರಾಜಕಾಲುವೆ ಹಾಗೂ ಬೃಹತ್ ಚರಂಡಿಗಳ ನಿರ್ಮಾಣಕ್ಕೆ ಹಾಗೂ ದುರಸ್ತಿಗೆ ಆದ್ಯತೆ ನೀಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಚರಂಡಿಗಳ ಸ್ವಚ್ಛತೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಪಟ್ಟಣದ ಸ್ವಚ್ಛತೆಗೆ ಒತ್ತು
ಪಟ್ಟಣದ ಅಭಿವೃದ್ಧಿಗೆ ಈಗಾಗಲೇ ₹25 ಕೋಟಿ ಬಿಡುಗಡೆಯಾಗಿದೆ. ಚರಂಡಿ ಸೇರಿದಂತೆ ಎಲ್ಲ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕಡ್ಡಾಯವಾಗಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.
- ಕೆ.ಎನ್.ರಾಜಣ್ಣ, ಸಹಕಾರ ಸಚಿವ
ಗಬ್ಬು ನಾರುತ್ತಿವೆ
ಚರಂಡಿ ಹೂಳು ಮತ್ತು ಕಸ ತುಂಬಿಕೊಂಡು ಗಬ್ಬು ನಾರುತ್ತಿವೆ. ಪುರಸಭೆ ಅಧಿಕಾರಿಗಳು ಹೆಚ್ಚು ಗಮನಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.
- ಆರ್.ರವಿ, ಮಧುಗಿರಿ ನಿವಾಸಿ
ನೀರು ಹರಿಯಲು ತೊಂದರೆ
ಚರಂಡಿ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದೆ. 17 ವಾರ್ಡ್‌ನಲ್ಲಿ ರಾಜಕಾಲುವೆ ಚರಂಡಿ ಕೊನೆಗೊಂಡಿದೆ. ಇಲ್ಲಿ ಕೊಳಚೆ ನೀರು ರೈತರ ಜಮೀನಿಗೆ ಹರಿಯುತ್ತಿದೆ.
- ರಾಘವೇಂದ್ರ, ಸ್ಥಳೀಯ ನಿವಾಸಿ
ಚರಂಡಿ ವ್ಯವಸ್ಥೆ ಮಾಡಿ
ಮಳೆಗಾಲದಲ್ಲಿ ತಗ್ಗುಪ್ರದೇಶದ ಮನೆಗಳಿಗೆ ನೀರು ಹರಿಯದಂತೆ ಅಧಿಕಾರಿಗಳು ಎಚ್ಚರವಹಿಸಿ ಚರಂಡಿ ವ್ಯವಸ್ಥೆ ಮಾಡಬೇಕು. ರಸ್ತೆಗಳಿಗೆ ಡಾಂಬರೀಕರಣ ಮಾಡಿದರೆ ತಗ್ಗುಪ್ರದೇಶದ ನಿವಾಸಿಗಳಿಗೆ ತೊಂದರೆಯಾಗುವುದಿಲ್ಲ.
- ಕೆ.ಆರ್.ಆನಂದ್, ಸ್ಥಳೀಯ ನಿವಾಸಿ
ಗಮನಹರಿಸಿ
ಪಟ್ಟಣದಲ್ಲಿರುವ ದೊಡ್ಡ ಚರಂಡಿಗಳನ್ನು ತಿಂಗಳಿಗೊಮ್ಮೆಯಾದರೂ ಸ್ವಚ್ಛತೆ ಮಾಡಬೇಕು. ಪುರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.
- ಅನಿಲ್ ಕುಂಬ್ಳೆ, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.