ADVERTISEMENT

ತಿಪಟೂರು: ನಾಯಿಗಳ ಹಾವಳಿ ತಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 6:47 IST
Last Updated 9 ಜನವರಿ 2026, 6:47 IST
ತಿಪಟೂರಿನಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು
ತಿಪಟೂರಿನಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು   

ತಿಪಟೂರು: ನಗರದ ತಾಲ್ಲೂಕು ಆಡಳಿತ ಸೌಧದ ಉಪವಿಭಾಗಧಿಕಾರಿ ಕಚೇರಿಯಲ್ಲಿ ಉಪವಿಭಾಗಧಿಕಾರಿ ಬಿ.ಕೆ.ಸಪ್ತಶ್ರೀ ಅಧ್ಯಕ್ಷತೆಯಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ, ತುರವೇಕೆರೆ ತಾಲ್ಲೂಕಿನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು.

ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ನಾಯಿಗಳ ಹಾವಳಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ನಾಯಿಗಳ ಸಂತತಿ ಹೆಚ್ಚಾಗುತ್ತಿದೆ. ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ನೀರಿನ ಗುಣಮಟ್ಟ ಹಾಗೂ ಶುದ್ಧತೆ ಖಚಿತಪಡಿಸಿಕೊಳ್ಳುವ ಜವಾಬ್ದಾರಿ ತಾಲ್ಲೂಕು ಆರೋಗ್ಯ ಅಧಿಕಾರಿಗಳದ್ದು. ಪ್ರತಿ ತಿಂಗಳು 6ರಂದು ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ADVERTISEMENT

ಮುಂದಿನ ದಿನಗಳಲ್ಲಿ ಜಾತ್ರೆ ಉತ್ಸವಗಳು ಆರಂಭವಾಗಲಿದ್ದು ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ನಿರ್ದೇಶಿಸಲಾಯಿತು. ತಾಲ್ಲೂಕಿನ ಮುಜರಾಯಿ ಹಾಗೂ ಇತರೆ ದೇವಸ್ಥಾನಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಿ ಮಾರ್ಗಸೂಚಿ ಅಳವಡಿಸಬೇಕು. ಗ್ರಾಮಗಳ ಮುಖಂಡರು ಹಾಗೂ ದೇವಸ್ಥಾನ ಸಮಿತಿಗಳೊಂದಿಗೆ ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ತಿಳುವಳಿಕೆ ಹಾಗೂ ಒಪ್ಪಿಗೆ ಪತ್ರಗಳನ್ನು ಏಕಗವಾಕ್ಷಿ ಯೋಜನೆಯಲ್ಲಿ ಮಾಹಿತಿ ಸಂಗ್ರಹಿಸಬೇಕು ಎಂದರು.

ರಸ್ತೆ ಬದಿಯಲ್ಲಿ ಕಸ ಹಾಕುವವರಿಗೆ ಮೊದಲು ತಿಳುವಳಿಕೆ ನೀಡಿ, ಮುಂದುವರಿದರೆ ದಂಡ ವಿಧಿಸಿ ನಂತರವೂ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಹೆಚ್ಚುವರಿ ದಂಡ ವಿಧಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ಕಾರ್ಯನಿರ್ವಹಣಾಧಿಕಾರಿ ಎಚ್.ಎಂ. ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್, ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲ್ಲೂಕು ಆಡಳಿತ ಸೌಧದ ಕಚೇರಿಯಲ್ಲಿ ಉಪವಿಭಾಗಧಿಕಾರಿ ಅಧ್ಯಕ್ಷತೆಯಲ್ಲಿ ಉಪವಿಭಾಗದ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯನ್ನು ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.