
ಚಿಕ್ಕನಾಯಕನಹಳ್ಳಿ: ಪಟ್ಟಣದ ಪ್ರಮುಖ ವಸತಿ ಪ್ರದೇಶವಾದ ಬಸವೇಶ್ವರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಹೈರಾಣಾಗಿದ್ದಾರೆ.
ಬಸವೇಶ್ವರನಗರದ ಬಯಲು ಪ್ರದೇಶದಲ್ಲಿ ಪ್ರತಿದಿನ ರಾತ್ರಿ 15ಕ್ಕಿಂತ ಹೆಚ್ಚು ಬೀದಿ ನಾಯಿಗಳು ಒಂದೆಡೆ ಬಿಡಾರ ಹೂಡುತ್ತಿವೆ. ಗುಂಪಾಗಿರುವ ಈ ನಾಯಿಗಳು ರಾತ್ರಿಯಿಡಿ ಜೋರಾಗಿ ಬೊಗಳುವುದು ಮತ್ತು ಅಡ್ಡಬರುವುದು ಸಾಮಾನ್ಯ. ನಾಯಿಗಳ ಈ ದೊಡ್ಡ ಗುಂಪಿನಿಂದಾಗಿ, ಆ ಮಾರ್ಗದಲ್ಲಿ ಸಂಚರಿಸಲು ಸಾರ್ವಜನಿಕರು ತೀವ್ರ ಭಯಭೀತರಾಗಿದ್ದಾರೆ.
ಈ ರಸ್ತೆಯು ಪಟ್ಟಣದ ಹಲವು ಪ್ರಮುಖ ಬಡಾವಣೆಗಳನ್ನು ಸಂಪರ್ಕಿಸುವ ಮುಖ್ಯ ಮಾರ್ಗವಾಗಿದೆ. ಖಾಸಗಿ ಬಸ್ ನಿಲ್ದಾಣದಿಂದ ಬಸವೇಶ್ವರನಗರ, ಬನಶಂಕರಿ ಬಡಾವಣೆ ಹಾಗೂ ಸರಸ್ವತಿಪುರ ಬಡಾವಣೆಗೆ ಹೋಗಲು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಹೆಚ್ಚಾಗಿ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ.
ಬೀದಿ ನಾಯಿಗಳ ಹಾವಳಿಯಿಂದಾಗಿ ಜನರು ಈ ಮಾರ್ಗ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಅನಿವಾರ್ಯವಾಗಿ ದೂರವಾದರೂ ಸಹ ಬೇರೆ ಮಾರ್ಗದಿಂದ ಸಂಚರಿಸುವಂತಾಗಿದೆ. ಇದರಿಂದ ಅನಗತ್ಯ ಸಮಯ ಮತ್ತು ಶ್ರಮ ವ್ಯಯವಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ನಾಯಿಗಳು ಹಿಂದಟ್ಟುವ ಭಯ, ಕಚ್ಚುವ ಆತಂಕ ಮತ್ತು ರಾತ್ರಿ ಸಂಚರಿಸುವವರಿಗೆ ಸುರಕ್ಷತೆಯ ಕೊರತೆ ಎದುರಾಗಿದೆ.
ಈ ಸಮಸ್ಯೆ ಹಲವು ದಿನಗಳಿಂದ ಮುಂದುವರಿದಿದ್ದರೂ, ಪುರಸಭೆ ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಪುರಸಭೆ ಸೂಕ್ತ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಬಸವೇಶ್ವರನಗರದ ನಿವಾಸಿಗಳು ಒತ್ತಾಯಿಸಿದ್ದಾರೆ.
‘ನನ್ನ ಇಬ್ಬರು ಮಕ್ಕಳನ್ನು ಟ್ಯೂಷನ್‌ನಿಂದ ರಾತ್ರಿ 8 ಗಂಟೆಗೆ ಕರೆದುಕೊಂಡು ಬರಲು ಹೋಗುತ್ತೇನೆ. ಹಲವು ದಿನಗಳಿಂದ ರಾತ್ರಿ ಸಮಯದಲ್ಲಿ ಬೀದಿ ನಾಯಿಗಳ ಹಿಂಡನ್ನು ಕಂಡು ಈ ಮಾರ್ಗದಲ್ಲಿ ಸಂಚರಿಸಲು ಹೆದರುತ್ತಿದ್ದೇನೆ. ಬೇರೆ ಮಾರ್ಗದಲ್ಲಿ ಬರಲು ದೂರವಾಗುತ್ತದೆ. ಅನಿವಾರ್ಯವಾಗಿ ಭಯದಿಂದಲೇ ಈ ಮಾರ್ಗವಾಗಿ ಸಂಚರಿಸುತ್ತಿದ್ದೇವೆ’ ಎನ್ನುತ್ತಾರೆ ಸರಸ್ವತಿಪುರ ಬಡಾವಣೆ ನಿವಾಸಿ ವಿನುತಾ.
‘ಬಸವೇಶ್ವರ ನಗರದಲ್ಲಿನ ಬಯಲು ಪ್ರದೇಶ ಬೀದಿನಾಯಿಗಳ ವಾಸಸ್ಥಳವಾಗಿದೆ. ಮಕ್ಕಳು, ಹಿರಿಯರು ಸಂಚಾರಕ್ಕೆ ಭಯಪಡುತ್ತಿದ್ದಾರೆ. ಹಗಲಲ್ಲಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಓಡಾಟ ನಡೆಸಿ ಸಂಜೆಯ ಹೊತ್ತಿಗೆ ಈ ಸ್ಥಳಕ್ಕೆ ಬರುತ್ತವೆ. ಇದರಿಂದ ಕೆಲಸದಿಂದ ಮನೆಗೆ ಬರುವ ನಮಗೆ ಈ ಮಾರ್ಗದಲ್ಲಿ ಸಂಚಾರಿಸಲು ಭಯವಾಗುತ್ತಿದೆ’ ಎಂದು ಬನಶಂಕರಿ ಬಡಾವಣೆ ನಿವಾಸಿ ಸಂಗೀತ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.