ADVERTISEMENT

ಶಿರಾ | ಸಂಚಾರ ದೀಪ ಮರೀಚಿಕೆ: ಸುಗಮ ಸಂಚಾರ ಸವಾಲು

ಎಚ್.ಸಿ.ಅನಂತರಾಮು
Published 17 ಮೇ 2025, 7:05 IST
Last Updated 17 ಮೇ 2025, 7:05 IST
ಶಿರಾದ ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ದೀಪ ಇಲ್ಲ
ಶಿರಾದ ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ದೀಪ ಇಲ್ಲ   

ಶಿರಾ: ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕಿರುವ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಅತಿವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಎಲ್ಲಿಯೂ ಸಿಗ್ನಲ್ ವ್ಯವಸ್ಥೆ ಇಲ್ಲ. ಹೆಸರಿಗೆ ನಗರಸಭೆ. ಸಂಚಾರ ನಿಯಮಗಳ ಪಾಲನೆ ಇಲ್ಲ. ಎಲ್ಲೆಂದರಲ್ಲಿ ವಾಹನ ನಿಲುಗಡೆ, ರಸ್ತೆಯಲ್ಲಿ ಓಡಾಟ ನಡೆಸಲು ಪಾದಚಾರಿಗಳು ಕಷ್ಟ ಪಡುವಂತಾಗಿದೆ.

ನಗರದ ಅಂಬೇಡ್ಕರ್ ವೃತ್ತ ಹಾಗೂ ದರ್ಗಾ ವೃತ್ತದಲ್ಲಿ 12 ವರ್ಷಗಳ ಹಿಂದೆ ತಲಾ ₹10 ಲಕ್ಷ ವೆಚ್ಚದಲ್ಲಿ ಸಿಗ್ನಲ್ ವ್ಯವಸ್ಥೆ ಮಾಡಲಾಯಿತು. ಆದರೆ ಈ ಸಂಚಾರ ದೀಪಗಳು ಕೆಲಸ ಮಾಡಿದ್ದು ಬೆರಳೆಣಿಕೆಯಷ್ಟು ದಿನಗಳು ಮಾತ್ರ. ಮೂರು ವರ್ಷಗಳ ಹಿಂದೆ ಎರಡು ಕಡೆ ಸಂಚಾರ ದೀಪಗಳನ್ನು ಕಿತ್ತು ಹಾಕಿ ಕಾರಂಜಿ ನಿರ್ಮಾಣ‌ ಮಾಡಿದ್ದಾರೆ. ಹೊಸದಾಗಿ ಸಿಗ್ನಲ್ ವ್ಯವಸ್ಥೆ ಮಾಡುವುದಾಗಿ ಹೇಳಿದರೂ ಅದು ಯಾವಾಗ ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರ ಇಲ್ಲ.

ADVERTISEMENT

ಶೀಘ್ರವಾಗಿ ಅಂಬೇಡ್ಕರ್ ವೃತ್ತ ಹಾಗೂ ದರ್ಗಾ ವೃತ್ತದಲ್ಲಿ ನಗರೋತ್ಥಾನ ಯೋಜನೆಯಡಿ ಸಿಗ್ನಲ್ ದೀಪ ಹಾಗೂ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಯಾವಾಗ ಆಳವಡಿಸಲಾಗುವುದು ಎನ್ನುವುದಕ್ಕೆ ಯಾರಲ್ಲೂ ಉತ್ತರವಿಲ್ಲ.

ನಗರದ ಅಂಬೇಡ್ಕರ್ ವೃತ್ತ (ಐ.ಬಿ ಸರ್ಕಲ್) ಸದಾ ವಾಹನ ದಟ್ಟಣೆಯಿಂದ ಕೂಡಿದ್ದು, ಇಲ್ಲಿ ಸಿಗ್ನಲ್ ಇಲ್ಲದಿರುವುದರಿಂದ ವಾಹನ ಸವಾರರು ಬೇಕಾಬಿಟ್ಟಿ ಸಂಚರಿಸುತ್ತಿದ್ದು ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ.

ಅಂಬೇಡ್ಕರ್ ವೃತ್ತಕ್ಕೆ ಜ್ಯೋತಿನಗರದ ಕಡೆಯಿಂದ ಪ್ರವಾಸಿ ಮಂದಿರದ ಕಡೆ, ಎಪಿಎಂಸಿ ಕಡೆ, ಬುಕ್ಕಾಪಟ್ಟಣ, ನಗರಸಭೆ, ಬಸ್‌ ನಿಲ್ದಾಣದ ಕಡೆ ಒಟ್ಟು 6 ಕಡೆಯಿಂದ ರಸ್ತೆಗಳು ಕೂಡುತ್ತಿದ್ದು ದೊಡ್ಡ ವೃತ್ತವಾಗಿದೆ. ಕಚೇರಿಗಳು, ಶಾಲೆ, ಕಾಲೇಜುಗಳಿಗೆ ಹೋಗುವವರು ಈ ರಸ್ತೆಗಳಲ್ಲಿ ಸಂಚರಿಸುವುದರಿಂದ ವಾಹನ ಸಂಚಾರ ದಟ್ಟವಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ‌ ಮಕ್ಕಳು ಇಲ್ಲಿ ಸಂಚರಿಸುತ್ತಿದ್ದು ಬೆಳಿಗ್ಗೆ ಮತ್ತು ಸಂಜೆ ತೊಂದರೆಯಾಗುತ್ತಿದೆ. ಇಲ್ಲಿ ಸಂಚಾರ ದೀಪದ ವ್ಯವಸ್ಥೆ ಇದ್ದರೆ ಅನುಕೂಲ ಎನ್ನುತ್ತಾರೆ ಸಾರ್ವಜನಿಕರು.

ಸಂಚಾರ ನಿಯಮಗಳನ್ನು ಸವಾರರು ಪಾಲನೆ ಮಾಡದಿರುವುದರಿಂದ ಹೆಚ್ವಿನ ಅಪಘಾತಗಳಿಗೆ ಕಾರಣವಾಗುತ್ತಿದೆ. ಅಪಘಾತಗಳನ್ನು ತಡೆಯಲು ಪೊಲೀಸರು ಮುಂಜಾಗ್ರತೆ ವಹಿಸಿ ನಗರಸಭೆ ಕಡೆಯಿಂದ ಬರುವ ವಾಹನಗಳು ನೇರವಾಗಿ ಅಂಬೇಡ್ಕರ್ ವೃತ್ತಕ್ಕೆ ಬರದೆ ಯೂ– ಟರ್ನ್ ತೆಗೆದುಕೊಂಡು ಬುಕ್ಕಾಪಟ್ಟಣ ವೃತ್ತದ ಕಡೆಯಿಂದ ಬರುವಂತೆ ರಸ್ತೆಯಲ್ಲಿ ಸಿಮೆಂಟ್ ಬ್ಲಾಕ್‌ಗಳನ್ನು ಇಟ್ಟರೂ ಕೆಲವರು ನಿಯಮ ಪಾಲನೆ ಮಾಡದೆ ಕಿರಿದಾದ ರಸ್ತೆಯಲ್ಲಿ ಬರುತ್ತಿದ್ದಾರೆ. ಅದೇ ರೀತಿ ಜ್ಯೋತಿನಗರದ ಕಡೆಯಿಂದ ಎಪಿಎಂಸಿ ಕಡೆ ಹೋಗಲು ಕಾರಂಜಿಯನ್ನು ಬಳಸಿಕೊಂಡು ಹೋಗುವಂತೆ ಸಿಮೆಂಟ್ ಬ್ಲಾಕ್ ಇಟ್ಟಿದ್ದರೂ ಯಾವುದೇ ಪ್ರಯೋಜನವಾಗದೆ ಸಿಮೆಂಟ್ ಬ್ಲಾಕ್‌ಗಳ ಮಧ್ಯೆ ವಾಹನಗಳನ್ನು ತೂರಿಸಿಕೊಂಡು ಹೋಗುತ್ತಾರೆ. ಅದೇ ಸಮಯದಲ್ಲಿ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ವಾಹನಗಳು ಬಂದರೆ ಅಪಘಾತವಾಗುವ ಸಾಧ್ಯತೆ ಹೆಚ್ಚಿದ್ದರೂ ಕ್ರಮವಹಿಸಿಲ್ಲ ಎಂದು ನಗರ ನಿವಾಸಿಗಳು ದೂರಿದ್ದಾರೆ.

ಶಿರಾದ ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ದೀಪ ಇಲ್ಲ
ಗಮನಹರಿಸಲು ಮನವಿ
ಶಾಸಕ ಟಿ.ಬಿ.ಜಯಚಂದ್ರ ಅವರು ಹಿಂದೆ ಸಚಿವರಾಗಿದ್ದಾಗ ಸಂಚಾರ ದೀಪ ಆಳವಡಿಸಲಾಗಿತ್ತು. ಅದರೆ ಇದರಿಂದ‌ ಯಾವುದೇ ಪ್ರಯೋಜನವಾಗಲಿಲ್ಲ. ಈಗ ಅವರು ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದು ಈ ಬಾರಿಯಾದರೂ ಸುಗಮ ಸಂಚಾರಕ್ಕೆ ಒತ್ತು ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.