ADVERTISEMENT

ಶಿರಾ: ಈಜಲು ಹೋಗಿದ್ದ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 14:17 IST
Last Updated 27 ಮಾರ್ಚ್ 2024, 14:17 IST
ಆರ್.ಮನು
ಆರ್.ಮನು   

ಶಿರಾ: ತಾಲ್ಲೂಕಿನ ಚಿಕ್ಕಸಂದ್ರ ಕೆರೆ ಸಮೀಪದ ಚೆಕ್‌ಡ್ಯಾಂನಲ್ಲಿ ಮಂಗಳವಾರ ಈಜಲು ತೆರಳಿದ್ದ ಐಟಿಐ ವಿದ್ಯಾರ್ಥಿ ಆರ್.ಮನು (17) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಮದಲೂರು ದಾಸರಹಳ್ಳಿ ಗ್ರಾಮದ ರಾಜಪ್ಪ ಅವರ ಪುತ್ರ ಮನು ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಓದುತ್ತಿದ್ದ. ಮಂಗಳವಾರ ಕಾಲೇಜಿಗೆ ಹೋಗಿ ಹಾಜರಾತಿ ಹಾಕಿದ ನಂತರ ಸ್ನೇಹಿತರ ಜೊತೆ ಈಜಾಡಲು ಚೆಕ್ ಡ್ಯಾಂಗೆ ಹೋಗಿದ್ದಾನೆ.

ಚೆಕ್‌ಡ್ಯಾಂ ದಡದಲ್ಲಿ ವಿದ್ಯಾರ್ಥಿಗಳು ಈಜಾಡುತ್ತಿದ್ದು, ಮನುಗೆ ಸರಿಯಾಗಿ ಈಜಾಡಲು ಬರದಿದ್ದರೂ ಸ್ವಲ್ಪ ದೂರ ಈಜಿಕೊಂಡು ಹೋಗಿದ್ದಾನೆ. ಗುಂಡಿಗಳಿರುವುದನ್ನು ತಿಳಿಯದೆ ಕೆಸರಿನಲ್ಲಿ ಸಿಲುಕಿ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ.

ADVERTISEMENT

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಾದ ಐಟಿಐ ಕಾಲೇಜಿನಲ್ಲಿ ಬುಧವಾರ ಶಾಸಕ ಟಿ.ಬಿ‌.ಜಯಚಂದ್ರ ಆವರು ಅಧಿಕಾರಿಗಳ ಸಭೆ ನಡೆಸಿದರು.

ಅಮಾನತಿಗೆ ಆಗ್ರಹ

ಕಾಲೇಜು ಸಮಯದಲ್ಲಿ ವಿದ್ಯಾರ್ಥಿಗಳು ಈಜಾಡಲು ಹೋಗಿದ್ದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಲೇಜು ಸಿಬ್ಬಂದಿ ಮತ್ತು ಪ್ರಾಂಶುಪಾಲರ ನಿರ್ಲಕ್ಷವೇ ವಿದ್ಯಾರ್ಥಿ ಸಾವಿಗೆ ಕಾರಣ. ಕಾಲೇಜಿಗೆ ಬಂದವರು ಹೇಗೆ ಹೊರಗೆ ಹೋದರು. ಕಾಲೇಜಿನಿಂದ ಮೂರು ಕಿ.ಮೀ ದೂರದಲ್ಲಿ ಘಟನೆ ನಡೆದಿದ್ದು ಪ್ರಾಂಶುಪಾಲರು ಬಂದಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ.

ಪ್ರಾಂಶುಪಾಲ ಶ್ರೀನಿವಾಸ ಮೂರ್ತಿ ಅವರನ್ನು ಅಮಾನತು ಮಾಡಬೇಕು ಅದುವರೆಗೂ ಮೃತ ದೇಹವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದರು. ಶಾಸಕ ಟಿ.ಬಿ.ಜಯಚಂದ್ರ ಇಲಾಖೆ ಅಧಿಕಾರಿಗಳು ಮತ್ತು ಪೋಷಕರ‌ ಸಭೆ ನಡೆಸಿದರು. ಪ್ರಾಂಶುಪಾಲರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯಕ್ಕೆ ಪೂರಕವಾದ ಅನೇಕ ಘಟನೆಗಳು ಮೇಲ್ನೋಟಕ್ಕೆ ಕಂಡುಬಂದ ಕಾರಣ ಈ ಕೊಡಲೇ ಪ್ರಾಂಶುಪಾಲರನ್ನು ಅಮಾನತು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು. ಸಚಿವ ಶರಣ ಪ್ರಕಾಶ್ ಪಾಟೀಲ ಅವರ ಜೊತೆ ಸಹ ಮೊಬೈಲ್‌ನಲ್ಲಿ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.