
ಹುಳಿಯಾರು ಪಟ್ಟಣ ಪಂಚಾಯಿತಿ ಮುಂದಿನ ಕಾಂಪೌಡ್ ಕಾಮಗಾರಿ ಪರಿಶೀಲಿಸಿದ ತಹಶೀಲ್ದಾರ್
ಹುಳಿಯಾರು: ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ನಡೆಯುತ್ತಿದ್ದ ಕಾಂಪೌಂಡ್ ಕಾಮಗಾರಿ ಕಳಪೆಯಾಗಿ ಎಂದು ತಹಶೀಲ್ದಾರ್ ಎಂ. ಮಮತಾ ಅಧಿಕಾರಿಗಳನ್ನು ಗುರವಾರ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಸಂತೆ ಜಾಗ ಸ್ಥಳಾಂತರದ ಪರಿಶೀಲನೆಗೆ ಪಟ್ಟಣ ಪಂಚಾಯಿತಿಗೆ ಬಂದಿದ್ದರು. ಅಲ್ಲಿಯೇ ನಡೆಯುತ್ತಿದ್ದ ಕಾಂಪೌಂಡ್ ನಿರ್ಮಾಣ ಕಾಮಗಾರಿ ವೀಕ್ಷಿಸಿದರು. ತಳಹದಿ ನಿರ್ಮಿಸದೆ ಕೇವಲ ಸೀಮೆಂಟ್ ಇಟ್ಟಿಗೆಗಳನ್ನು ಜೋಡಿಸಿ ಕಾಂಪೌಂಡ್ ನಿರ್ಮಿಸುತ್ತಿರುವುದನ್ನು ಗಮನಿಸಿದ ಅವರು, ಕಾಮಗಾರಿ ಬಗ್ಗೆ ಮೇಸ್ತ್ರಿಯಿಂದ ತಕ್ಷಣ ಸ್ಪಷ್ಟನೆ ಪಡೆದರು.
ಕಾಮಗಾರಿ ಮೇಲ್ವಿಚಾರಣೆ ಹೊಣೆ ಹೊತ್ತಿದ್ದ ಮುಖ್ಯಾಧಿಕಾರಿ ಮಂಜುನಾಥ್ ಅವರನ್ನು ಪ್ರಶ್ನಿಸಿದ ತಹಶೀಲ್ದಾರ್, ‘ಇಂತಹ ಕಳಪೆ ಕಾಮಗಾರಿಯಿಂದ ಸರ್ಕಾರದ ಹಣ ದುರುಪಯೋಗವಾಗುತ್ತದೆ. ತಳಹದಿ ಇಲ್ಲದೆ ನಿರ್ಮಿಸಿದ ಕಾಂಪೌಂಡ್ ಕುಸಿದರೆ ಜೀವಹಾನಿಗೆ ಯಾರು ಹೊಣೆ?’ ಎಂದು ಪ್ರಶ್ನಿಸಿದರು.
ಪಟ್ಟಣ ಪಂಚಾಯಿತಿಯಲ್ಲಿಯೇ ಎಂಜಿನಿಯರ್ ಇಂತಹ ಗಂಭೀರ ಲೋಪಕ್ಕೆ ಅವಕಾಶ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪಟ್ಟಣ ಪಂಚಾಯಿತಿ ಅಧ್ಯಕ್ಷರನ್ನು ಪ್ರಶ್ನಿಸಿದರು.
ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ನನಗೆ ತಾಂತ್ರಿಕ ಮಾಹಿತಿಯ ಅರಿವು ಇಲ್ಲ. ಎಂಜಿನಿಯರ್‌ಗೆ ಗಮನಹರಿಸುವಂತೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.
‘ಕಾಂಪೌಂಡ್ ಕುಸಿದು ಯಾವುದೇ ಅನಾಹುತ ಸಂಭವಿಸಿದರೆ ನೇರವಾಗಿ ನಿಮ್ಮ ಮೇಲೆಯೇ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಾಧಿಕಾರಿಗೆ ತಹಶೀಲ್ದಾರ್ ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಈಗಾಗಲೇ ನಿರ್ಮಿಸಿದ್ದ ಕಾಂಪೌಂಡ್ ಕೆಡವಿ, ನಿಯಮಾನುಸಾರ ತಳಹದಿ ಸಹಿತ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಮುಖ್ಯಾಧಿಕಾರಿ ಮಂಜುನಾಥ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೀತಿ, ಮಾಜಿ ಸದಸ್ಯ ರಾಘವೇಂದ್ರ, ರೈತ ಸಂಘದ ಅಧ್ಯಕ್ಷ ಚಂದ್ರಪ್ಪ, ಶಂಕರೇಶ್, ಆರ್‌ಐ ಶ್ರೀನಿವಾಸ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.