ADVERTISEMENT

ಫಲಿತಾಂಶಕ್ಕೆ ‘ಸುಪ್ರೀಂ’ ಅಂಕುಶ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 10:50 IST
Last Updated 30 ಅಕ್ಟೋಬರ್ 2020, 10:50 IST
ಪೋಟೋ : 29-ಟಿಪಿಆರ್ 5: ತಿಪಟೂರು ನಗರಸಭೆಯ ಹೊರಾಂಗಣ ಚಿತ್ರ.
ಪೋಟೋ : 29-ಟಿಪಿಆರ್ 5: ತಿಪಟೂರು ನಗರಸಭೆಯ ಹೊರಾಂಗಣ ಚಿತ್ರ.   

ತಿಪಟೂರು: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಅಕ್ಟೋಬರ್ 31ಕ್ಕೆ ನಿಗದಿಯಾಗಿದೆ. ಆದರೆ, ಚುನಾವಣೆ ನಡೆಸಿದರೂ, ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‍ನಲ್ಲಿವೆ. ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿರುವ ಪುರಸಭೆ, ನಗರಸಭೆ ಹೊರತುಪಡಿಸಿ ಉಳಿದೆಡೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿತ್ತು.

ಹೈಕೋರ್ಟ್‍ನಲ್ಲಿ ಮೀಸಲಾತಿ ಪ್ರಕರಣ ಬಾಕಿ ಇರುವುದರಿಂದ ಚುನಾವಣೆಯ ಫಲಿತಾಂಶ ಕಾಯ್ದಿರಿಸುವಂತೆ ಸುಪ್ರೀಂ ಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸಲಾಗಿತ್ತು.

ADVERTISEMENT

ಹಾಗಾಗಿ ಚುನಾವಣೆ ನಡೆಸಿದರೂ ಫಲಿತಾಂಶವನ್ನು ಒಂದು ತಿಂಗಳವರಗೆ ಕಾಯ್ದಿರಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಅಲ್ಲದೇ ತಿಂಗಳ ಒಳಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಲ್ಲಿ ಇರುವ ಎಲ್ಲ ಪ್ರಕರಣಗಳನ್ನು ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಆದೇಶಿಸಿದೆ.

ಸುಪ್ರೀಂ ಕೋರ್ಟ್‌ನ ಈ‌ ಆದೇಶದಿಂದಾಗಿ ನಗರಸಭಾ ಸದಸ್ಯರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹೆಚ್ಚಿನ ಮತ ಪಡೆದರೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಒಂದು ತಿಂಗಳು ಕಾಯುವುದು ಆಕಾಂಕ್ಷಿಗಳಿಗೆ ಅನಿವಾರ್ಯವಾಗಿದೆ.

ಸದಸ್ಯರ ಪ್ರವಾಸ: ನಗರಸಭೆಯ ಚುನಾವಣೆ ಇದೇ 31 ಕ್ಕೆ ನಿಗದಿಯಾಗಿದ್ದು, ಬಿಜೆಪಿಯ 11, ಲೋಕೇಶ್ವರ ಬೆಂಬಲಿತ ಐವರು (ಜೆಡಿಎಸ್‌ನಿಂದ ಗೆದ್ದಿರುವವರು) ಮತ್ತು ಮೂವರು ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 19 ಸದಸ್ಯರು ಪ್ರವಾಸ ತೆರಳಿದ್ದಾರೆ. ಇದರಿಂದಾಗಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.