
ತುರುವೇಕೆರೆ: ನಾಗರಿಕತೆಯ ವ್ಯಾಮೋಹಕ್ಕೊಳಗಾದ ಮನುಷ್ಯ ತನ್ನತನವನ್ನು ಬಿಟ್ಟುಕೊಡುತ್ತಿದ್ದಾನೆ ಎಂದು ತುಮಕೂರು ಪ.ಪೂ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ ವಿಷಾದಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಯಾಗಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ‘ಸುವರ್ಣ ಸಂಭ್ರಮ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗತ ಇತಿಹಾಸದ ಸ್ಮರಣೀಯ ನೆನಪುಗಳು ಭವ್ಯ ಭವಿಷ್ಯವನ್ನು ಕಟ್ಟಿ ಹೊಸ ಇತಿಹಾಸ ನಿರ್ಮಿಸಲು ಸಹಕಾರಿಯಾಗುತ್ತವೆ. ಕಾಲೇಜು ಶಿಕ್ಷಣ, ಅಲ್ಲಿನ ಸಾಧನೆ ವ್ಯಕ್ತಿತ್ವ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಡುತ್ತದೆ. ಶ್ರೀಮಂತರ ಮಕ್ಕಳು ನಮ್ಮನ್ನು ಆಳುವಂತಾಗಿ ಸಾಮಾನ್ಯ ಬಡ ಮಕ್ಕಳು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಅಸಹಾಯಕ ಪ್ರೇಕ್ಷಕರಾಗುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನ ಪಡೆದು ಮಾದರಿಯಾಗಬೇಕು ಎಂದರು.
ವರ್ತೂರು ಸಂತೋಷ್ ಮಾತನಾಡಿ, ಹಳ್ಳಿ ಮಕ್ಕಳಿಗೆ ವೃತ್ತಿ ಶಿಕ್ಷಣ ಕೊಡಿಸಲೆಂದೇ ರೈತರು ಬೆಲೆಬಾಳುವ ಜಮೀನು ಮಾರುತ್ತಿದ್ದಾರೆ. ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದರೆ ಬಹುತೇಕರು ಅತ್ತ ವೃತ್ತಿ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಲಾಗದೆ ಇತ್ತ ಕೃಷಿಗೆ ಮರಳಲಾರದೆ ತ್ರಿಶಂಕು ಸ್ಥಿತಿ ತಲುಪಿದ್ದಾರೆ. ತುರುವೇಕೆರೆ ತಾಲ್ಲೂಕು ಹಳ್ಳಿಕಾರ್ ತಳಿ ಅಭಿವೃದ್ಧಿ ಕೇಂದ್ರವಾಗಿದ್ದು ರೈತರು ಮನೆಗೊಂದು ಹಳ್ಳಿಕಾರ್ ಹಸು ಸಾಕಬೇಕು ಎಂದು ಕಿವಿಮಾತು ಹೇಳಿದರು.
ಬಾಲಗುರುಮೂರ್ತಿ ಹಾಗೂ ವರ್ತೂರು ಸಂತೋಷ್ ಅವರನ್ನು ಅಭಿನಂದಿಸಲಾಯಿತು. ಕಾಲೇಜಿನ ಹಳೆ ವಿದ್ಯಾರ್ಥಿ ಡಾ.ನಂಜಪ್ಪ, ಡಿ.ಬಿ.ವಿನುತಾಶ್ರೀ, ಪ್ರಸಾದ್, ಡಿ.ಬಿ.ಹೊನ್ನೇಶ್ ಗೌಡ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಟಿ.ಆರ್. ಮಲ್ಲಿಕಾರ್ಜುನ್ ಬಹುಮಾನ ವಿತರಿಸಿದರು.
ತಾ.ಪಂ ಇಒ ಪಿ.ಎಸ್.ಅನಂತರಾಜು, ಬಿಇಒ ಸೋಮಶೇಖರ್, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಪ್ರಭಾಕರ ರೆಡ್ಡಿ, ಪಾಪಣ್ಣ, ಜಿ.ಬಿ. ವೆಂಕಟೇಶ್, ಟಿ.ಎಸ್. ಬೋರೇಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.