ADVERTISEMENT

ಹಳ್ಳಿಯ ಪ್ರತಿ ಮನೆಗೆ ಎರಡು ಕಸದ ಡಬ್ಬಿ

50 ಗ್ರಾಮ ಪಂಚಾಯಿತಿಯ ಊರುಗಳ ನೈರ್ಮಲ್ಯಕ್ಕೆ ಅನುಷ್ಠಾನಗೊಳ್ಳುತ್ತಿದೆ ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 16:26 IST
Last Updated 11 ಜೂನ್ 2019, 16:26 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ತುಮಕೂರು: ಜಿಲ್ಲೆಯ ಹಳ್ಳಿಗಳ ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಜಿಲ್ಲಾ ಪಂಚಾಯಿತಿ ರೂಪರೇಷೆ ರೂಪಿಸಿದೆ.

ಪ್ಲಾಸ್ಟಿಕ್‌ ಕಸದಿಂದ ಹಳ್ಳಿಗಳ ಪರಿಸರವು ಮಾಲಿನ್ಯಗೊಳ್ಳುತ್ತಿದೆ. ಹಾಗಾಗಿ ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸಿ, ಅದನ್ನು ಘನತ್ಯಾಜ್ಯ ವಿಂಗಡಣಾ ಕೇಂದ್ರಕ್ಕೆ ಒಯ್ದು ಮರುಬಳಕೆಯ ವಸ್ತುಗಳನ್ನು ಬೇರ್ಪಡಿಸಲು ಯೋಜಿಸಲಾಗಿದೆ.

ರಾಜ್ಯ ಸರ್ಕಾರ 1,000 ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಂಗಡಣಾ ಘಟಕಗಳನ್ನು ನಿರ್ಮಿಸಿ ನೈರ್ಮಲ್ಯಕ್ಕೆ ನಾಂದಿ ಹಾಡಲು ತೀರ್ಮಾನಿಸಿದೆ. ಇದರಡಿಯಲ್ಲಿಯೇ ಜಿಲ್ಲೆಯ 50 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ಅನುಷ್ಠಾನ ಹೀಗೆ : ಪಂಚಾಯಿತಿಯು ಪ್ರತಿ ಮನೆಗೆ ಎರಡು ಕಸದ ಡಬ್ಬಿಗಳನ್ನು ನೀಡುತ್ತದೆ. ಒಂದರಲ್ಲಿ ಹಸಿ ಕಸ ಮತ್ತು ಮತ್ತೊಂದರಲ್ಲಿ ಒಣ ಕಸ ಸಂಗ್ರಹ ಮಾಡಲು ತಿಳಿಸಲಾಗುತ್ತದೆ. ಎರಡು ದಿನಗಳಿಗೆ ಒಮ್ಮೆ ಪಂಚಾಯಿತಿಯ ತಳ್ಳುಗಾಡಿಯಿಂದ ಮನೆ ಕಸವನ್ನು ಸಂಗ್ರಹಿಸಲಾಗುತ್ತದೆ. ಆ ಗಾಡಿಗಳ ಕಸವನ್ನು ಗ್ರಾಮ ಪಂಚಾಯಿತಿಗೆ ಒಂದರಂತೆ ನಿರ್ಮಿಸಲಾಗುವ ಕಸ ವಿಂಗಡಣಾ ಘಟಕಕ್ಕೆ ಒಯ್ಯಲಾಗುತ್ತದೆ.

ಘಟಕದಲ್ಲಿ ಪ್ಲಾಸ್ಟಿಕ್‌, ಚರ್ಮ, ಕಬ್ಬಿಣದ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಸಂಗ್ರಹವಾಗುವ ಗುಜರಿ ವಸ್ತುಗಳನ್ನು ಹರಾಜು ಹಾಕಿ ಪಂಚಾಯಿತಿಗೆ ಆದಾಯ ಗಳಿಸಲು ಯೋಜಿಸಲಾಗಿದೆ.

‘ಕಸ ವಿಂಗಡಣೆಯ ಘಟಕಗಳ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಗುರುತು ಮಾಡಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಟೆಂಡರ್‌ ಕರೆದು ಕಸ ಸಂಗ್ರಹಣೆಯ ಡಬ್ಬಿಗಳನ್ನು ಖರೀದಿಸಿ ವಿತರಣೆ ಮಾಡುತ್ತೇವೆ. ಕಸ ಸಾಗಣೆಗೆ ತಳ್ಳುಗಾಡಿ ಮತ್ತು ಟೆಂಪೊಗಳನ್ನು ಖರೀದಿಸುತ್ತೇವೆ. 150 ಮನೆಗಳಿಗೆ ಒಂದು ತಳ್ಳುಗಾಡಿ ಹಾಗೂ ಊರುಗಳಲ್ಲಿ ಸಂಗ್ರಹವಾಗುವ ಕಸದ ಪ್ರಮಾಣದ ಅನುಸಾರ ಟೆಂಪುಗಳನ್ನು ಖರೀದಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿ ಬಾಲರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಮುಂಬರುವ ದಿನಗಳಲ್ಲಿ ಪ್ರತಿ ಮನೆಯಿಂದ ಕಸ ಸಂಗ್ರಹಿಸಲು ಕನಿಷ್ಠ ಶುಲ್ಕವನ್ನು ಪಡೆದು ಆದಾಯ ಸಂಗ್ರಹಿಸುತ್ತೇವೆ. ಈ ಯೋಜನೆ ಅನುಷ್ಠಾನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್‌ ಇಲಾಖೆ ಅನುದಾನದೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಸಹ ಬಳಸಿಕೊಳ್ಳಲು ಚಿಂತನೆ ನಡೆದಿದೆ’ ಎಂದು ಅವರು ತಿಳಿಸಿದರು.

ಹಳ್ಳಿ ಜನರು ಹಸಿ ಕಸವನ್ನು ತಿಪ್ಪೆಗೆ ಹಾಕಿ, ಒಣ ಕಸವನ್ನು(ಪ್ಲಾಸ್ಟಿಕ್‌) ಪಂಚಾಯಿತಿ ಗಾಡಿಯಲ್ಲಿ ಹಾಕಿದರೆ ಊರುಕೇರಿಯೂ ಸ್ವಚ್ಛವಾಗಿ ಇರುತ್ತದೆ.

ಬಾಲರಾಜು, ಮುಖ್ಯ ಯೋಜನಾ ಅಧಿಕಾರಿ, ಜಿಲ್ಲಾ ಪಂಚಾಯಿತಿ

*

ಅಂಕಿ–ಅಂಶ

50 - ಕಸ ವಿಂಗಡಣೆ ಘಟಕ ನಿರ್ಮಾಣಗೊಳ್ಳಲಿರುವ ಗ್ರಾ.ಪಂ.ಗಳು

₹ 20 ಲಕ್ಷ - ಯೋಜನೆ ಅನುಷ್ಠಾನಕ್ಕೆ ಪ್ರತಿ ಗ್ರಾ.ಪಂ.ಗೆ ಹಂಚಿಕೆಯಾದ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.