ADVERTISEMENT

ತುಮಕೂರು: ಬಿಸಿಲಿನ ತಾಪ; ಈಜುಕೊಳದಲ್ಲಿ ಮಕ್ಕಳ ಕಲರವ

ಬೇಸಿಗೆಯಲ್ಲಿ ಈಜು ಮೋಜಿನ ಮಜಾ, ನಗರದ ಬೆರಳೆಣಿಕೆಯಷ್ಟು ಈಜುಕೊಳದಲ್ಲೇ ಕಲಿಕೆಗೆ ಉತ್ಸಾಹ

ರಾಮರಡ್ಡಿ ಅಳವಂಡಿ
Published 21 ಏಪ್ರಿಲ್ 2019, 20:00 IST
Last Updated 21 ಏಪ್ರಿಲ್ 2019, 20:00 IST
ಟೌನ್‌ ಕ್ಲಬ್‌ ಈಜುಕೊಳದಲ್ಲಿ ಈಜು ನೋಟ
ಟೌನ್‌ ಕ್ಲಬ್‌ ಈಜುಕೊಳದಲ್ಲಿ ಈಜು ನೋಟ   

ತುಮಕೂರು: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾಲ್ಕಾರು ದಿನಗಳಿಂದ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆ ಸುರಿದರೂ ಧಗೆ ಆವರಿಸಿದೆ. ಹಣ್ಣಿನ ರಸ, ಎಳನೀರು, ಮಜ್ಜಿಗೆ, ತಂಪು ಪಾನೀಯ, ಐಸ್ ಕ್ರೀಮ್ ಸೇವಿಸಿ ದಣಿವು ತಣಿಸಿಕೊಳ್ಳುವುದರ ಜೊತೆಗೆ ಈ ವರ್ಷ ನಗರದ ಜನ ಈಜುಕೊಳಗಳತ್ತ ಹೆಚ್ಚು ಮುಖ ಮಾಡಿದ್ದಾರೆ.

ಟೌನ್ ಹಾಲ್ ಬಳಿಯ ಟೌನ್ ಕ್ಲಬ್ ಈಜುಕೊಳ, ಮರಳೂರು ಬಳಿ ರಿಂಗ್ ರಸ್ತೆಯಲ್ಲಿರುವ ಶಿರೋಯಿ ಅಕ್ವಾಟಿಕ್ಸ್ ಈಜುಕೊಳಗಳು, ಕೌತಮಾರನಹಳ್ಳಿಯ ಕವಿತಾಕೃಷ್ಣ ಅವರ ತೋಟದಲ್ಲಿರುವ ಈಜುಕೊಳ ಬೇಸಿಗೆಯಲ್ಲಿ ತುಂಬಿ ತುಳುಕುತ್ತಿವೆ. ದೊಡ್ಡವರಿಗಿಂತ ಚಿಕ್ಕಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈಜುಕೊಳದಲ್ಲಿ ಈಜಿ ಖುಷಿ ಪಡುತ್ತಿದ್ದಾರೆ.

ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳಿಗೆ ಈ ಅವಧಿಯಲ್ಲಿ ಈಜು ಕಲಿಸಬೇಕು ಎಂಬ ಉದ್ದೇಶದಿಂದ ಪಾಲಕರು ಪ್ರತಿ ದಿನ ಈಜುಕೊಳಕ್ಕೆ ಕರೆದುಕೊಂಡು ಬರುತ್ತಲೇ ಇರುತ್ತಾರೆ. ದಿನಕ್ಕೆ ₹ 80ರಿಂದ 100, ತಿಂಗಳಿಗೆ ₹ 3000 ಶುಲ್ಕ ನಿಗದಿಪಡಿಸಿದರೂ ಪೋಷಕರು ಹಿಂದೆ ಮುಂದೆ ನೋಡುತ್ತಿಲ್ಲ. ಈಜು ತರಬೇತಿಗೆ ಕರೆದುಕೊಂಡು ಬಂದು ಮಕ್ಕಳ ಈಜು ಕಲಿಕೆ, ಈಜಾಟ ಕಂಡು ಸಂಭ್ರಮಿಸುತ್ತಿದ್ದಾರೆ.

ADVERTISEMENT

ಬೇಸಿಗೆಯಲ್ಲಿ ಮಕ್ಕಳಿಗಾಗಿಯೇ ಆಯಾ ವಯಸ್ಸಿಗೆ ಅನುಸಾರ ಚಿತ್ರಕಲೆ, ಸಂಗೀತ, ನೃತ್ಯ, ಕ್ರೀಡೆ, ಯೋಗ, ವಿಜ್ಞಾನ ಹೀಗೆ ವಿವಿಧ ರೀತಿಯ ಶಿಬಿರಗಳನ್ನು ಸಂಘ ಸಂಸ್ಥೆಗಳು ಆಯೋಜಿಸಿದರೆ, ಶಿಕ್ಷಣ ಸಂಸ್ಥೆಗಳೇ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಶಿಬಿರಗಳನ್ನು ನಡೆಸುತ್ತಿವೆ.

ಆದರೆ, ಈಜು ತರಬೇತಿ ಶಿಬಿರಗಳು ವಿರಳ. ಈಜುಕೊಳಗಳು ಇರಬೇಕು. ತರಬೇತಿದಾರರು, ನಿರ್ವಹಣೆ ಇದ್ದರೆ ಉಪಯುಕ್ತ. ಇಂತಹ ಈಜುಕೊಳ ಸಾರ್ವಜನಿಕರಿಗಾಗಿ ಮಹಾನಗರ ಪಾಲಿಕೆಯಾಗಲಿ, ಕ್ರೀಡಾ ಇಲಾಖೆಯಾಗಲಿ ನಿರ್ಮಿಸಿಯೇ ಇಲ್ಲ. ಸಂಘ ಸಂಸ್ಥೆಗಳು, ಕ್ರೀಡಾ ತರಬೇತಿದಾರರು, ಸಾರ್ವಜನಿಕರು ಮಹಾನಗರ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಟೌನ್ ಕ್ಲಬ್ ಈಜುಕೊಳವೇ ನಗರದ ಒಳಗಿರುವ ಈಜುಕೊಳ ಮಾತ್ರ. ಅದನ್ನು ಬಿಟ್ಟರೆ 2017ರಲ್ಲಿ ರಿಂಗ್ ರಸ್ತೆಯಲ್ಲಿ ನಿರ್ಮಾಣವಾದ ಶಿರೋಯಿ ಅಕ್ವಾಟಿಕ್ಸ್ ಈಜುಕೊಳ ಇದೆ. ಇವು ಒಂದಿಷ್ಟು ಸಾರ್ವಜನಿಕರಿಗೆ ಈಜಿನ ಮೋಜು, ತರಬೇತಿ ಪಡೆಯಲು ಸಹಕಾರಿಯಾಗಿವೆ ಎನ್ನಬಹುದು.

ಈ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಪುರುಷರು, ಮಹಿಳೆಯರು, ಮಕ್ಕಳು ಈಜುಕೊಳದತ್ತ ಧಾವಿಸುತ್ತಿದ್ದಾರೆ. ದಿನಕ್ಕೆ ಒಂದು ಗಂಟೆ, ಅರ್ಧ ಗಂಟೆ ಈಜುಕೊಳದಲ್ಲಿ ಈಜಾಡುತ್ತಿದ್ದಾರೆ. ಮಕ್ಕಳಿಗೆ ಒಂದು ಸಮಯ, ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಸಮಯ ನಿಗದಿ, ಸಂಖ್ಯೆಗೆ ಅನುಗುಣವಾಗಿ ಈಜುಕೊಳದಲ್ಲಿ ಈಜಲು ಪ್ರವೇಶಾವಕಾಶ ಮಾಡಿಕೊಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.