ADVERTISEMENT

ತುಮಕೂರು: ದುಡ್ಡು ಕೊಡದಿದ್ದರೆ ಕೆಲಸ ಆಗಲ್ಲ

ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಸದಸ್ಯರ ದೂರು

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 12:15 IST
Last Updated 24 ಜೂನ್ 2019, 12:15 IST
ತಾಲ್ಲೂಕು ಪಂಚಾಯಿತಿ ಸದಸ್ಯೆ ಕವಿತಾ ಅವರು ಬೆಸ್ಕಾಂ ಅಧಿಕಾರಿ ವಿರುದ್ಧ ಹರಿಹಾಯ್ದರು
ತಾಲ್ಲೂಕು ಪಂಚಾಯಿತಿ ಸದಸ್ಯೆ ಕವಿತಾ ಅವರು ಬೆಸ್ಕಾಂ ಅಧಿಕಾರಿ ವಿರುದ್ಧ ಹರಿಹಾಯ್ದರು   

ತುಮಕೂರು: ಗ್ರಾಮ ಪಂಚಾಯಿತಿಯಲ್ಲಿನ ಸಿಬ್ಬಂದಿಗಳಿಗೆ ಲಂಚ ಕೊಡದಿದ್ದರೆ ಯಾವ ಸರ್ಕಾರಿ ಸೇವಾ–ಸೌಲಭ್ಯಗಳು ಸಿಗುವುದಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು(ಪಿಡಿಒ) ಆ ಸಭೆ, ಈ ಸಭೆ ಇದೆ ಎಂದು ಪಂಚಾಯಿತಿ ಕಚೇರಿಗೆ ಬರುವುದಿಲ್ಲ. ಇದರಿಂದ ಜನರಿಗೆ ಸರ್ಕಾರಿ ಯೋಜನೆಗಳ ಪ್ರಯೋಜನ ಸಕಾಲಕ್ಕೆ ತಲುಪುತ್ತಿಲ್ಲ ಎಂದು ತುಮಕೂರು ತಾಲ್ಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಒಕ್ಕೊರಲಿನಿಂದ ಅಧ್ಯಕ್ಷರಿಗೆ ದೂರಿದರು.

ಸ್ಥಳೀಯ ಶಾಸಕರ ಬೆಂಬಲಿತ ಪಂಚಾಯಿತಿ ಸದಸ್ಯರ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ತ್ವರಿತವಾಗಿ ನಡೆಯುತ್ತವೆ. ಉಳಿದ ಸದಸ್ಯರ ಕ್ಷೇತ್ರಗಳಿಗೆ ಅನುದಾನವೂ ಸಕಾಲಕ್ಕೆ ಬರುವುದಿಲ್ಲ. ಕಾಮಗಾರಿಗಳನ್ನು ಸಹ ನಿಧಾನವಾಗಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಕೆಲವು ಸದಸ್ಯರು ಆರೋಪಿಸಿದರು.

ADVERTISEMENT

ಕೋರಾ ಕ್ಷೇತ್ರದ ಸದಸ್ಯೆ ಕವಿತಾ, ರೈತರಿಗೆ ಸೂಕ್ತ ಪರಿಹಾರ ನೀಡದೆ, ಪುನರ್ವಸತಿ ಕಲ್ಪಿಸದೆ ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಸುತ್ತಿದ್ದಾರೆ. ರೈತರಿಗೆ ತಲಾ ₹ 25,000 ನೀಡಿದ ಬಾಯಿಮುಚ್ಚಿಸಿದ್ದಾರೆ. ಸಮರ್ಪಕವಾದ ಪರಿಹಾರ ನೀಡುವವರೆಗೂ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಹರಿಹಾಯ್ದರು.

ಬಹುತೇಕ ರೈತರು ಒಂದೆರಡು ಎಕರೆ ಜಮೀನು ಹೊಂದಿರುವವರು. ಅವರ ಹೊಲ, ತೋಟಗಳನ್ನು ಯೋಜನೆಗಳಿಗಾಗಿ ಕಬಳಿಸಿದರೆ, ಅವರು ಬೀದಿಪಾಲಾಗುತ್ತಾರೆ. ಅವರಿಗೆ ಸೂಕ್ತ ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದರು. ಈ ಮಾತಿಗೆ ಇತರ ಸದಸ್ಯರು ಸಹ ಧ್ವನಿಗೂಡಿಸಿದರು.

ತಾ.ಪಂ.ಸದಸ್ಯ ವಿಜಯಕುಮಾರ್‌, ಬಹುತೇಕ ಸರ್ಕಾರಿ ಶಾಲೆಗಳಿಗೆ ತಡೆಗೋಡೆ ಇಲ್ಲ. ಇದರಿಂದ ಶಾಲೆಗಳು ಸಂಜೆ ಹೊತ್ತು ಕುಡುಕರ ಅಡ್ಡೆಗಳಾಗಿವೆ. ಇಲ್ಲಿ ತಿಂದು–ಕುಡಿದು ಸ್ವಚ್ಛತೆ ಹಾಳು ಮಾಡಿ ಹೋಗುತ್ತಾರೆ. ಶಾಲೆಗೆ ಬರುವ ಮಕ್ಕಳಿಂದ ಈ ಕಸವನ್ನು ತೆಗೆಸುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಅಸಮಾಧಾನ ಹೊರಹಾಕಿದರು.

ಈ ಕುರಿತು ಕ್ರಮ ವಹಿಸುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಅಧಿಕಾರಿಗಳು, ಇಲಾಖೆ ಹಮ್ಮಿಕೊಂಡಿರುವ ಸಮಗ್ರ ಕೃಷಿ ಅಭಿಯಾನ, ಮೇವು ಬ್ಯಾಂಕ್‌, ಮುಂಗಾರಿಗೆ ಮಾಡಿಕೊಂಡಿರುವ ತಯಾರಿಗಳ ಕುರಿತು ಮಾಹಿತಿ ನೀಡಿದರು. ಮಳೆ, ಸಿಡಿಲು, ಕಾಯಿಲೆಯಿಂದ ಸತ್ತಿರುವ ಕುರಿಗಳ ಮಾಲೀಕರಿಗೆ ಪರಿಹಾರ ನೀಡಿರುವ ಕುರಿತು ತಿಳಿಸಿದರು.

ಸಿರಿಧಾನ್ಯಗಳ ಬೆಳೆ ಉತ್ತೇಜಿಸಲು ರಾಜ್ಯ ಸರ್ಕಾರ ಆರಂಭಿಸಿರುವ ‘ರೈತ ಸಿರಿ’ ಯೋಜನೆ ಮತ್ತು ಕೇಂದ್ರದ ಕಿಸಾನ್‌ ಸಮ್ಮಾನ ನಿಧಿಯ ಕುರಿತು ಸಹ ಮಾಹಿತಿ ನೀಡುತ್ತಿದ್ದೇವೆ ಎಂದು ಹೇಳಿದರು.

ಮೀನುಗಾರಿಕೆ ಇಲಾಖೆ ಅಧಿಕಾರಿ, ಪರಿಶಿಷ್ಟ ಸಮುದಾಯದ ಉಪಯೋಜನೆಗಳಡಿ ಬಲೆಗಳನ್ನು ಖರೀದಿಸಲಾಗಿದೆ. ಅರ್ಹರಿಗೆ ವಿತರಿಸುವ ಕಾರ್ಯ ಮಾತ್ರ ಬಾಕಿ ಇದೆ ಎಂದರು.

ಇತ್ತೀಚೆಗೆ ಕೋರಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ವಾರ ವಿದ್ಯುತ್‌ ಸಂಪರ್ಕ ಇರಲಿಲ್ಲ. ಇದನ್ನು ಸರಿಪಡಿಸಲು ಬೆಸ್ಕಾಂ ಅಧಿಕಾರಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಲಿಲ್ಲ. ಜನರು ಬೆಸ್ಕಾಂನ ಸ್ಥಳೀಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಯಿತು. ನೀವು ಒಂದು ವಾರ ಕರೆಂಟ್‌ ಇಲ್ಲದೆಯೂ ಬದುಕುತ್ತಿರಾ ಎಂದು ಬೆಸ್ಕಾಂ ಅಧಿಕಾರಿಯ ಮೇಲೆ ಸದಸ್ಯೆ ಕವಿತಾ ಹರಿಹಾಯ್ದರು.

ಶಿಕ್ಷಣ ಇಲಾಖೆ ಅಧಿಕಾರಿ, ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರೌಢಶಾಲೆಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಶೇ 83.19 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದೆ. 3 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಎಲ್‌ಕೆಜಿ ಕಲಿಕೆ ಪರಿಚಯಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಶಾಲಾ ಕಟ್ಟಡಗಳ ಕಾಮಗಾರಿ ಪ್ರಗತಿ, ಪಠ್ಯಪುಸ್ತಕ ಮತ್ತು ಸಮವಸ್ತ್ರಗಳ ವಿತರಣೆಯ ಕುರಿತು ಸಹ ಹೇಳಿದರು.

ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಮನ ಸೆಳೆದರು.

ಇದಕ್ಕೆ ಬೆಸ್ಕಾಂ ಅಧಿಕಾರಿ ಪ್ರತಿಕ್ರಿಯಿಸಿ, ವಿದ್ಯುತ್‌ ಬಿಲ್‌ ಪಾವತಿ ಬಾಕಿ ಇತ್ತು. ಹಾಗಾಗಿ ವಿದ್ಯುತ್‌ ಸಂಪರ್ಕವನ್ನು ಈ ಹಿಂದೆ ಕಡಿತ ಮಾಡಲಾಗಿತ್ತು. ಇತ್ತೀಚೆಗೆ ವಿದ್ಯುತ್‌ ಕಡಿತ ಮಾಡಿಲ್ಲ. ನಿಲಯದಲ್ಲಿನ ವಿದ್ಯುತ್‌ ಮೀಟರ್‌ನ ಆರ್.ಆರ್.ಸಂಖ್ಯೆ ನೀಡಿದರೆ, ಪರಿಶೀಲಿಸುತ್ತೇವೆ ಎಂದರು.

ಸಭೆಯಲ್ಲಿ ಇಒ ವೆಂಕಟೇಶ್‌, ತಾ.ಪಂ.ಅಧ್ಯಕ್ಷ ಗಂಗಾಂಜನೇಯ, ಯೋಜನಾಧಿಕಾರಿ ಆದಿ ಲಕ್ಷ್ಮಮ್ಮ, ಸಹಾಯಕ ನಿರ್ದೇಶಕ ಜಗದೀಶ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಇಒ ಮೇಲೆ ಅಕ್ರಮದ ಆರೋಪ
ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ(ಇಒ) ವೆಂಕಟೇಶ್‌ ಅವರು ಹೆಬ್ಬೂರಿನಲ್ಲಿನ ಪಾದಚಾರಿ ಮಾರ್ಗಳನ್ನು ಒತ್ತುವರಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಊರಕೆರೆಯಲ್ಲಿನ ಪ್ರಯಾಣಿಕರ ತಂಗುದಾಣದ ಜಾಗವನ್ನು ಖಾಸಗಿ ವ್ಯಕ್ತಿಯ ಹೆಸರಿನಲ್ಲಿ ಖಾತಾ ಮಾಡಿಕೊಟ್ಟಿದ್ದಾರೆ ಎಂದು ನೇರವಾಗಿ ಸದಸ್ಯ ವಿಜಯ್‌ಕುಮಾರ್‌ ಆರೋಪಿಸಿದರು.

ನಿವೃತ್ತಿನ ಅಂಚಿನಲ್ಲಿನ ಇರುವ ಇಒ ಅವರು ಇಂತಹ ಅಕ್ರಮಗಳನ್ನು ಮಾಡಬಾರದು. ಇದರಿಂದ ಅವರು ನಿವೃತ್ತಿ ಜೀವನದಲ್ಲಿ ಕಷ್ಟ ಅನುಭವಿಸಬೇಕಾಗಾಗುತ್ತದೆ ಎಂದು ಎಚ್ಚರಿಸಿದರು. ಆರೋಪಗಳನ್ನು ಕಾರ್ಯನಿರ್ವಹಣಾ ಅಧಿಕಾರಿ ಅಲ್ಲಗಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.