ADVERTISEMENT

ಶಿರಾ: ಶೇ 30ರಷ್ಟು ಆಸ್ತಿ ತೆರಿಗೆ ಹೆಚ್ಚಳ

ನಗರಸಭೆಯಿಂದ ಗಾಯದ ಮೇಲೆ ಬರೆ; ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಮೇ 2020, 16:34 IST
Last Updated 20 ಮೇ 2020, 16:34 IST
ನಗರಸಭೆ ಕಚೇರಿ
ನಗರಸಭೆ ಕಚೇರಿ   

ಶಿರಾ: ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನಗರಸಭೆ ಶೇ 30ರಷ್ಟು ಆಸ್ತಿ ತೆರಿಗೆ ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ.

ಕೊರೊನಾದಿಂದ ಪ್ರತಿಯೊಬ್ಬರೂ ಸಂಕಷ್ಟಕ್ಕೆ ಗುರಿಯಾಗಿದ್ದು, ಜೀವನ ನಡೆಸುವುದೇ ಕಷ್ಟವಾಗಿರುವ ಸಮಯದಲ್ಲಿ ನಗರಸಭೆ ಏಕಾಏಕಿ ಆಸ್ತಿ ತೆರಿಗೆ ಹೆಚ್ಚಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಸ್ತುತ ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಧಿಕಾರಿಗಳೇ ಈ ಬಾರಿ ಬಜೆಟ್ ಮಂಡನೆ ಮಾಡಿದ್ದು, ಅದರಲ್ಲಿ ಶೇ 30ರಷ್ಟು ತೆರಿಗೆ ಹೆಚ್ಚಿಸಲಾಗಿದೆ.

ADVERTISEMENT

ಬಜೆಟ್ ಬಗ್ಗೆ ನಗರದ ಗಣ್ಯರು, ವರ್ತಕರು, ಸಂಘ ಸಂಸ್ಥೆಗಳ ಮುಖಂಡರ ಜೊತೆ ಎರಡು ಬಾರಿ ಪೂರ್ವಭಾವಿ ಸಭೆ ನಡೆಸಿದರು. ಎಲ್ಲಿಯೂ ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಅಧಿಕಾರಿಗಳು ಸುಳಿವನ್ನು ಸಹ ನೀಡಿರಲಿಲ್ಲ. ಬಜೆಟ್ ಮಂಡನೆಯನ್ನು ಸಹ ಮಾಧ್ಯಮಗಳು ಸೇರಿದಂತೆ ಯಾರ ಗಮನಕ್ಕೂ ತಾರದೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ತೆರಿಗೆ ಪಾವತಿಸಲು ಹೋದವರಿಗೆ ಶೇ 30ರಷ್ಟು ತೆರಿಗೆ ಹೆಚ್ಚಿಸಿರುವ ಚಲನ್ ನೀಡಲಾಗುತ್ತಿದೆ. ನಗರಸಭೆಗೆ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದು, ಅವರು ಸಹ ಬಜೆಟ್ ಮಂಡನೆಯಲ್ಲಿ ಭಾಗಿಯಾಗಿಲ್ಲ.

‘ಪ್ರತಿ ಮೂರು ವರ್ಷಕ್ಕೆ ಒಂದು ಬಾರಿ ತೆರಿಗೆ ಹೆಚ್ಚಿಸಲು ನಗರಸಭೆಗೆ ಅವಕಾಶವಿದೆ. ಹಿಂದೆ ನಗರಸಭೆ ಸದಸ್ಯರು ತೆರಿಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದಾಗ ಶೇ 15ರಷ್ಟು ಹೆಚ್ಚಿಸಲಾಗಿತ್ತು. ಆದರೆ, ಈ ಬಾರಿ ಸದಸ್ಯರು ಇಲ್ಲದಿರುವುದರಿಂದ ಶೇ 30ರಷ್ಟು ಹೆಚ್ಚಿಸಲಾಗಿದೆ. ತುಮಕೂರು ನಗರಪಾಲಿಕೆಯಲ್ಲಿ ಶೇ 15ರಷ್ಟು ಹೆಚ್ಚಿಸಿರುವಾಗ ಶಿರಾದಲ್ಲಿ ಏಕೆ ಶೇ 30ರಷ್ಟು ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಎಲ್ಲೂ ಈ ಪ್ರಮಾಣದಲ್ಲಿ ತೆರಿಗೆ ಹೆಚ್ಚಿಸಿಲ್ಲ ಇಲ್ಲಿ ಮಾತ್ರ ಏಕೆ’ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.