ADVERTISEMENT

ಶಿಕ್ಷಕರಲ್ಲಿ ಸಿಂಪಥಿಗೆ ಬದಲಾಗಿ ಎಂಪಥಿ ಮೈಗೂಡಲಿ: ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 6:50 IST
Last Updated 25 ಜನವರಿ 2020, 6:50 IST
ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ 27ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ಸಮ್ಮೇಳನ
ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ 27ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ಸಮ್ಮೇಳನ   

ತುಮಕೂರು:‘ಶಿಕ್ಷಕರು ಸಿಂಪಥಿಗೆ ಬದಲಾಗಿ ಎಂಪಥಿ ಮೈಗೂಡಿಸಿಕೊಂಡಾಗ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಸಾಧ್ಯ’ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.

ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ 27ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣದಷ್ಟು ಅತ್ಯುನ್ನತ ಉತ್ಪಾದನಾ ಕ್ಷೇತ್ರ ಸಮಾಜದಲ್ಲಿ ಇನ್ನೊಂದಿಲ್ಲ. ಇದರ ಮಹತ್ವ ಅರಿತು ಶಿಕ್ಷಕರು ಮುನ್ನಡೆಯಬೇಕು. ಧ್ಯೇಯನಿಷ್ಠೆ, ಸಮರ್ಪಣಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಶಿಕ್ಷಕರು ಮೇಲ್ಫಂಕ್ತಿಯಲ್ಲಿ ಮುನ್ನಡೆದಾಗ ಮಕ್ಕಳು ಸಹ ಇದೇ ದಾರಿಯಲ್ಲಿ ಸಾಗುತ್ತಾರೆ’ ಎಂದರು.

ADVERTISEMENT

ತುಮಕೂರಿಗೂ ನನಗೂ ವಿಶೇಷ ಸಂಬಂಧ: ‘ನಾನು ಹಿಂದೆ ಸಚಿವನಾಗಿದ್ದಾಗ ಮೊದಲು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದು ತುಮಕೂರಿಗೆ. ಅಂದು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯ 101ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅಲ್ಲದೇ ಶಿಕ್ಷಣ ಸಚಿವನಾದ ಮೇಲೆ ಮೊದಲು ಶಾಲಾ ವಾಸ್ತವ್ಯ ಮಾಡಿದ್ದು ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಅಚ್ಚಮನಹಳ್ಳಿ. ಹಾಗಾಗಿ ನನಗೂ ತುಮಕೂರಿಗೂ ವಿಶೇಷವಾದ ಸಂಬಂಧವಿದೆ. ಈ ಸಂಬಂಧವನ್ನು ನಾನು ಎಂದಿಗೂ ಮರೆಯಲಾರೆ’ ಎಂದರು.

ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ರಾಮಕೃಷ್ಣ ಆಶ್ರಮವು ಶೈಕ್ಷಣಿಕ ಕ್ಷೇತ್ರದೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಅಲ್ಲದೇ, ಶಿಕ್ಷಣವೊಂದೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂಬುದನ್ನು ಅರಿತು ಕಳೆದ 27 ವರ್ಷಗಳಿಂದ ಆಶ್ರಮದ ಆವರಣದಲ್ಲಿ ಶಿಕ್ಷಕರ ಸಮ್ಮೇಳನ ನಡೆಸುತ್ತಿದೆ. ಈವರೆಗೆ 32 ಶಿಕ್ಷಕರ ಸಮ್ಮೇಳನ ನಡೆಸಲಾಗಿದೆ’ ಎಂದರು.

‘ರಾಮಕೃಷ್ಣ ಆಶ್ರಮವು ಕಳೆದ 50 ವರ್ಷಗಳ ಹಿಂದೆಯೇ ಶಾಲೆಗಳನ್ನು ತೆರೆಯುವುದನ್ನು ಕೈಬಿಟ್ಟು ಸಮಾಜದಲ್ಲಿ ಇರುವ ಶಾಲೆಗಳೇ ತಮ್ಮ ಶಾಲೆಗಳು ಎಂದು ಭಾವಿಸಿದೆ. ನೈತಿಕವಾಗಿ ಮತ್ತು ಸಾಮಾಜಿಕವಾಗಿ ಶಿಕ್ಷಕರ ಮತ್ತು ಮಕ್ಕಳ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಿದೆ. ಶಿಕ್ಷಕರು ಎಂದೂ ತಮ್ಮ ವೃತ್ತಿಯ ಬಗ್ಗೆ ಉತ್ಸಾಹ ಕಳೆದುಕೊಳ್ಳಬಾರದು’ ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಬೆಂಗಳೂರು ಬಸವನಗುಡಿ ರಾಮಕೃಷ್ಣ ಮಠದ ಸ್ವಾಮಿ ಮಂಗಳನಾಥಾನಂದಜೀ ಮಹಾರಾಜ್ ಆಶೀರ್ವಚನ ನೀಡಿದರು. ಡಾ.ಕೆ.ವಿ.ಅನಸೂಯ ಉಪನ್ಯಾಸ ನೀಡಿದರು. ಶಾಸಕ ಜ್ಯೋತಿಗಣೇಶ್, ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಬಿಇಒ ಸಿ.ರಂಗಧಾಮಪ್ಪ, ಶಿಕ್ಷಣ ತಜ್ಞ ಚಿದಾನಂದ್ ಎಂ.ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.