ಹುಳಿಯಾರು ಪಟ್ಟಣ ಪಂಚಾಯಿತಿ ಸದಸ್ಯರೊಂದಿಗೆ ಸಭೆ ನಡೆಸಿದ ತಹಶೀಲ್ದಾರ್
ಹುಳಿಯಾರು: ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳ ವಿಷಯದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ತಹಶೀಲ್ದಾರ್ ಕೆ.ಪುರಂದರ ಶುಕ್ರವಾರ ಸದಸ್ಯರ ಮತ್ತು ವಾಣಿಜ್ಯ ಮಳಿಗೆಗಳ ಬಾಡಿಗೆದಾರರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
ಬೆಳಿಗ್ಗೆ 10 ಗಂಟೆಗೆ ಮಳಿಗೆ ಬಾಡಿಗೆದಾರರ ಸಭೆಯಲ್ಲಿ ಬಾಡಿಗೆದಾರರ ಅಹವಾಲು ಆಲಿಸಿದ ತಹಶೀಲ್ದಾರ್, ಹರಾಜು ಪ್ರಕ್ರಿಯೆಯಲ್ಲಿ ನೀವು ಭಾಗವಹಿಸಬಾರದು. ಹರಾಜಿನ ನಂತರ ಕೋರ್ಟ್ ಆದೇಶದಂತೆ ಹರಾಜಿನ ಹಣಕ್ಕಿಂತ ಶೇ 5ರಷ್ಟು ಹೆಚ್ಚು ಹಣ ನೀಡಿ ಬಾಡಿಗೆ ಪಡೆಯಬಹುದು. ಶೇ 18 ರಷ್ಟು ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಾತಿ ಇರುವುದರಿಂದ ಅಷ್ಟು ಮಳಿಗೆಗಳನ್ನು ಅವರಿಗೆ ಕಾಯ್ದಿರಿಸಲಾಗುತ್ತದೆ ಎಂದರು.
ಇದಕ್ಕೆ ಒಪ್ಪದ ಬಾಡಿಗೆದಾರರು ‘ಹರಾಜು ಪ್ರಕ್ರಿಯೆಯಲ್ಲಿ ಬಾಗವಹಿಸಬಾರದು ಎಂದು ಕೋರ್ಟ್ ಆದೇಶದಲ್ಲಿ ಉಲ್ಲೇಖವಾಗಿಲ್ಲ. ನಾವು ಕೂಡ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಶೇ 18 ಮೀಸಲಾತಿ ಕೂಡ ಉಲ್ಲೇಖವಾಗಿಲ್ಲ. ನೀವು ಮಳಿಗೆಗಳಲ್ಲಿ ಮೀಸಲಾತಿ ನೀಡುವುದಾದರೆ ಪ್ರತ್ಯೇಕ ಮಳಿಗೆಗಳನ್ನು ನಿರ್ಮಿಸಬೇಕು. ಬಾಡಿಗೆದಾರರು ಎಲ್ಲರೂ ವ್ಯಾಪಾರಸ್ಥರಾಗಿದ್ದು ಮಳಿಗೆ ತಪ್ಪಿಸಿದರೆ ಬೀದಿ ಪಾಲಾಗಬೇಕಾಗುತ್ತದೆ’ ಎಂದು ಅಲವತ್ತುಕೊಂಡರು.
ಪಟ್ಟಣ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಕೆಲ ಸದಸ್ಯರು ಮಾತನಾಡಿ, ‘ಬೀಗ ಮುದ್ರೆ ತೆರವುಗೊಳಿಸುವಾಗ ಸೌಜನ್ಯಕ್ಕಾದರೂ ಆಹೋರಾತ್ರಿ ಧರಣಿ ನಡೆಸಿದ ಸದಸ್ಯರನ್ನು ಕರೆದಿಲ್ಲ. ನಾವು ಕೂಡ ಯಾವುದೇ ಫಲಾಪೇಕ್ಷೆಯಿಲ್ಲದೆ ಕೇವಲ ಪಟ್ಟಣ ಅಭಿವೃದ್ಧಿಗೆ ಶ್ರಮಿಸಲು ಹೋರಾಟ ಮಾಡಲಾಗಿತ್ತು. ಬಾಡಿಗೆ ಹಣ ಹೆಚ್ಚಾಗಿ ಬಂದರೆ ಪಟ್ಟಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಬಹುದಾಗಿದೆ’ ಎಂದರು.
‘ಆಹೋರಾತ್ರಿ ಧರಣಿ ನಡೆಸಿದ ವೇಳೆ ಯಾವ ಅಧಿಕಾರಿಗಳು ಬಾರದೆ ಕೇವಲ ಬೀಗ ತೆಗೆಸುವ ವೇಳೆ ಬಂದಿದ್ದೀರಾ. ಇದರಿಂದ ನಮಗೆ ನೋವಾಗಿದೆ’ ಎಂದರು.
ತಹಶೀಲ್ದಾರ್ ಪ್ರತಿಕ್ರಿಯಿಸಿ, ‘ವಕೀಲರ ಬಳಿ ಕೂಲಂಕಷವಾಗಿ ಚರ್ಚಿಸಿದಾಗ ತಪ್ಪಿನ ಕ್ರಮವಾಗಿದೆ ಎಂದು ಮನವರಿಕೆಯಾಯಿತು. ತುರ್ತು ಆಗಿದ್ದರಿಂದ ಸದಸ್ಯರ ಸಭೆ ಕರೆದು ಚರ್ಚಿಸಲು ಆಗಲಿಲ್ಲ’ ಎಂದರು.
ಮಳಿಗೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಬಾಡಿಗೆದಾರರಿಗೆ ಇನ್ನೆರಡು ದಿನದಲ್ಲಿ ನೊಟೀಸ್ ನೀಡಲು ಈಗಾಗಲೇ ಮುಖ್ಯಾಧಿಕಾರಿಗೆ ತಿಳಿಸಿದ್ದೇನೆ. ನಾವು ಕಾನೂನಾತ್ಮಕವಾಗಿ ನಿರ್ಧಾರ ಮಾಡಿ ತೆರವಿಗೆ ಅಣಿಗೊಳಿಸಬೇಕು ಎಂದು ಸದಸ್ಯರಿಗೆ ಹೇಳಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ನಾಗಭೂಷಣ, ಚುನಾಯಿತ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.