ಕುಣಿಗಲ್: ತಾಲ್ಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ 10 ಸಾವಿರ ಆಶ್ರಯ ನಿವೇಶನಗಳನ್ನು ವಿತರಿಸಲು ಗುರಿ ಹೊಂದಿದ್ದು, ಈಗಾಗಲೇ 300 ಎಕರೆ ಜಮೀನು ಗುರುತಿಸಲಾಗಿದೆ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಶ್ರಯ ಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲ್ಲೂಕಿನಲ್ಲಿ ಜನಪರ ಕಾರ್ಯಗಳಿಗೆ ವಿರೋಧಿಗಳು ನಿರಂತರ ಅಡ್ಡಿಪಡಿಸುತ್ತಿದ್ದಾರೆ. ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಗುರಿ ಸಾಧಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಹಳೆ ಹಕ್ಕುಪತ್ರಗಳನಿಟ್ಟುಕೊಂಡು ಆಶ್ರಯ ನಿವೇಶನಗಳನ್ನು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಹೆಬ್ಬೂರು ಹೋಬಳಿ ವ್ಯಾಪ್ತಿಯ ಫಲಾನುಭವಿಗಳು ತಾಲ್ಲೂಕಿನಲ್ಲಿ ಹಕ್ಕುಪತ್ರಗಳನ್ನು ಪಡೆದಿರುವುದು ಕಂಡು ಬಂದಿವೆ. ಅವೆಲ್ಲವೂ ಅಮಾನ್ಯವಾಗಿದೆ. ನಿಯಮಾನುಸಾರ ದಾಖಲೆಗಳನ್ನು ಪಡೆದ ನಂತರ ಹಕ್ಕುಪತ್ರ ವಿತರಣೆ ಮಾಡದ ಕಾರಣ ನಗರಾಭಿವೃದ್ಧಿ ಯೋಜನೆ ಮಂಜೂರಾತಿ ಪಡೆದ ನಂತರ ನಿವೇಶನಗಳನ್ನು ವಿಂಗಡಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಶ್ರಯ ನಿವೇಶನಗಳ ವಿತರಣೆ ಕಾರ್ಯಕ್ಕೆ ತಾವು ಸಿದ್ಧರಿದ್ದರೂ ಅಧಿಕಾರಿವರ್ಗ (ಭೂ ಮಾಪನ, ಕಂದಾಯ ಮತ್ತು ಗ್ರಾಮಪಂಚಾಯಿತಿ) ನಿರ್ಲಕ್ಷ ತೋರುತ್ತಿದೆ. ನಿವೇಶನಗಳಿಗೆ ಮೀಸಲಿಟ್ಟ ಜಮೀನಿನ ವಿವಾದಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೆಲವೆಡೆ ತಡೆಯಾಜ್ಞೆಯಾಗಿರುವಲ್ಲಿ ಅಧಿಕಾರಿಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ನಿವೇಶನಗಳ ಜಮೀನು ಸಮಸ್ಯೆಗಳನ್ನು ಸ್ಥಳಕ್ಕೆ ತೆರಳಿ ವಾಸ್ತವ ಅರಿತು ಬಗೆಹರಿಸುವಂತೆ ಸೂಚಿಸಿದರೂ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ನಿವೇಶನದ ಜಮೀನು ಕಲ್ಲು ಬಂಡೆಗಳಿಂದ ಕೂಡಿದ್ದು, ತೆರವಿಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ತಹಶೀಲ್ದಾರ್ ರಶ್ಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತ ಕುಮಾರ್, ಗ್ರಾಮ ಪಂಚಾಯಿತಿ ಪಿಡಿಒ, ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.