ADVERTISEMENT

ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರು ಬದಲಾಯಿಸಿದರೆ ಹೋರಾಟ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 12:38 IST
Last Updated 26 ನವೆಂಬರ್ 2020, 12:38 IST

ತುಮಕೂರು: ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗೊಲ್ಲರ ಅಭಿವೃದ್ಧಿ ನಿಗಮ ಎಂದು ಬದಲಿಸಲು ಹೊರಟಿದ್ದು, ಸರ್ಕಾರ ಇವರ ಲಾಬಿಗೆ ಮಣಿದು ಹೆಸರು ಬದಲಾಯಿಸಿದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ಜಿಲ್ಲಾ ಕಾಡುಗೊಲ್ಲರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಂ.ಈರಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಮುಖಂಡರನ್ನು ಒಗ್ಗೂಡಿಸಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ಪರಿಣಾಮ 13 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಆದರೆ ಸರ್ಕಾರ ಅಭಿವೃದ್ಧಿ ನಿಗಮ ಮಾಡಿದ್ದು ಬಿಟ್ಟರೆ, ಅಧ್ಯಕ್ಷರ ನೇಮಕ ಮತ್ತು ಅನುದಾನ ನೀಡಿಲ್ಲ. ಕೂಡಲೇ ಅಧ್ಯಕ್ಷರ ನೇಮಕ ಮಾಡಿ, ಕನಿಷ್ಠ ₹ 200 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಡುಗೊಲ್ಲ ಸಮುದಾಯವನ್ನು ಗೊಲ್ಲ ಸಮುದಾಯದ ಕೆಲವರು ಗುತ್ತಿಗೆ ಹಿಡಿದಂತೆ ವರ್ತಿಸುತ್ತಿದ್ದಾರೆ. ಸರ್ಕಾರದ ನಡೆಗಳ ಬಗ್ಗೆ ಸಮಾಲೋಚಿಸುವ ಸಂಬಂಧ ನ.30ರಂದು ಶಿರಾದಲ್ಲಿ ರಾಜ್ಯದ ಎಲ್ಲ ತಾಲ್ಲೂಕುಗಳ ಕಾಡುಗೊಲ್ಲ ಮುಖಂಡರ ಸಭೆ ಕರೆಯಲಾಗಿದೆ. ಒಂದು ವೇಳೆ ಸರ್ಕಾರ‌ ಹೆಸರು ಬದಲಾಯಿಸಿದರೆ ಯಾವ ರೀತಿಯಲ್ಲಿ ಹೋರಾಟ ನಡೆಸಬೇಕು ಎಂಬುದರ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ADVERTISEMENT

ಸರ್ಕಾರ ಕಾಡುಗೊಲ್ಲರನ್ನು ಎಸ್‌ಟಿ ಜಾತಿ ಪಟ್ಟಿಗೆ ಸೇರಿಸುವ ಕುರಿತಂತೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯ ಇದಾಗಿದ್ದು ರಾಜ್ಯದ 28 ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಾಗಿದ್ದಾರೆ. ಸರ್ಕಾರ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಲಾಬಿಗೆ ಮಣಿಯಬಾರದು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಶ್ರೀಕೃಷ್ಣ ಯಾದವ ಯುವವೇದಿಕೆ ಅಧ್ಯಕ್ಷ ಗೋಪಿ ಯಾದವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.