ADVERTISEMENT

ಬದಲಾಗುತ್ತಿದೆ ಗ್ರಾಮ ಪಂಚಾಯಿತಿ ಚುನಾವಣಾ ಸ್ವರೂಪ, ಜನಪರದಿಂದ ಹಣಪರದತ್ತ..!

ಟಿ.ಎಚ್.ಗುರುಚರಣ್ ಸಿಂಗ್
Published 20 ಡಿಸೆಂಬರ್ 2020, 3:40 IST
Last Updated 20 ಡಿಸೆಂಬರ್ 2020, 3:40 IST

ಕುಣಿಗಲ್: ತಾಲ್ಲೂಕಿನಲ್ಲಿ ಮೊದಲಿಗೆ ಜನಪ್ರಿಯ ರಾಜಕಾರಣ ನಂತರ ಜನಪರ ರಾಜಕಾರಣದಿಂದ ಈಗ ಹಣಪರ ರಾಜಕಾರಣಕ್ಕೆ ಗ್ರಾಮಪಂಚಾಯಿತಿ ಚುನಾವಣೆ ನಾಂದಿಯಾಗಿದೆ.

ಹಿರಿಯ ರಾಜಕೀಯ ಮುಖಂಡರೊಬ್ಬರು ಪ್ರಿತಿಕ್ರಿಯಿಸಿ, ತಾಲ್ಲೂಕಿನಲ್ಲಿ ತಮ್ಮಣ್ಣಗೌಡ, ಅಂದಾನಯ್ಯ, ಹುಚ್ಚಮಾಸ್ತಿಗೌಡ, ಡಿ.ನಾಗರಾಜಯ್ಯ ಮತ್ತು ಮುದ್ದಹನುಮೆಗೌಡ ಅಧಿಕಾರ ಆವಧಿಯಲ್ಲಿ ಜನಪ್ರತಿನಿಧಿಗಳು ಜನಮನ ಗೆದ್ದು, ಜನಪ್ರಿಯ ರಾಜಕಾರಣಿಗಳು ಎನಿಸಿಕೊಂಡಿದ್ದರು. ವೈ.ಕೆ.ರಾಮಯ್ಯ ನಿರಂತರ ಅಭಿವೃದ್ಧಿ ಕಾರ್ಯಗಳಿಂದ ಜನಪ್ರಿಯತೆಗೆ ಬದಲಾಗಿ ಜನಪರ ರಾಜಕೀಯಕ್ಕೆ ಮುನ್ನುಡಿ ಬರೆದರು. ಇತ್ತೀಚೆಗೆ ತಾಲ್ಲೂಕಿನಲ್ಲಿ ಹಣಪರ ರಾಜಕೀಯ (ಫೈನಾನ್ಸ್ ಪಾಲಿಟಿಕ್ಸ್) ಹೆಚ್ಚು ಗಮನ ಸೆಳೆಯುತ್ತಿದೆ’ ಎಂದರು.

ತಾಲ್ಲೂಕಿನ 36 ಗ್ರಾಮಪಂಚಾಯಿತಿಗಳಲ್ಲಿ 37 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರೂ, ಬಹುತೇಕರ ಆಯ್ಕೆ ಹಣಪರ ರಾಜಕಾರಣದ ಪಾಲಾಗಿ, ಅವಿರೋಧವಾಗಿ ಗೆದ್ದರೂ ಘೋಷಣೆಯಾಗದ ಉಳಿದ ಪರಿಸ್ಥಿತಿ ಇತಿಹಾಸದಲ್ಲೆ ಪ್ರಥಮಬಾರಿಗೆ ನಡೆದಿದೆ. ಸದಸ್ಯತ್ವದ ಹರಾಜು ಮಾಡಿದವರು ಗಡಿಪಾರು ಮಾಡುವ ಮಟ್ಟಕ್ಕೆ ಬೆಳೆದಿದೆ.

ADVERTISEMENT

ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಂಗಸ್ವಾಮಿ ಪ್ರತಿಕ್ರಿಯಿಸಿ, ‘ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಅಧಿಕಾರಕ್ಕಾಗಿ ಹಣ ಹಂಚಲೇಬೇಕಾದ ಸ್ಥಿತಿ ಮುಂದುವರೆದಿದೆ. ಕಳೆದ ಮೂರು ಚುನಾವಣೆಗಳಲ್ಲಿ ಕೇವಲ ₹20,000ದಿಂದ ₹50,000 ಖರ್ಚಾಗಿತ್ತು. ಈಗ ವ್ಯವಸ್ಥೆ ಬದಲಾಗಿದೆ ಲಕ್ಷಾಂತರ ಹಣವಿಲ್ಲದೆ ಚುನಾವಣೆ ಸ್ಪರ್ಧಿಸಲು ಸಾಧ್ಯವಿಲ್ಲದೆ ಸುಮ್ಮನಾಗಬೇಕಾಯಿತು’ ಎಂದರು.

ಗ್ರಾಮಪಂಚಾಯಿತಿಗಳಿಗೆ ಹರಿದು ಬರುತ್ತಿರುವ ಅನುದಾನ ಮತ್ತು ನರೇಗಾ ಹಣ ಹಲವರನ್ನು ಆಕರ್ಷಿಸುತ್ತಿದೆ.ಕೋವಿಡ್‌ನಿಂದಾಗಿ ಗ್ರಾಮಕ್ಕೆ ಬಂದಿರುವ ಯುವಕರು ಪಂಚಾಯಿತಿ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜೆಸಿಬಿ ರಾಜಣ್ಣ.

ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಒಂದೆಡೆ ಮತದಾರ ಮತ ಮಾರಾಟಕ್ಕಿಳಿಯುತ್ತಿದ್ದಾನೆ. ಮತ್ತೊಂದೆಡೆ ಅಭ್ಯರ್ಥಿ ಶತಾಯ ಗತಾಯ ಗೆಲ್ಲಬೇಕೆಂದು ಮತ ಖರೀದಿಗೆ ಮುಂದಾಗುತ್ತಿದ್ದಾನೆ. ಇದು ಪ್ರಜಾಪ್ರಭುತ್ವಕ್ಕೆ ಪೂರಕವಲ್ಲ ಎನ್ನುವುದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಆರ್. ಚಿಕ್ಕಣ್ಣ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.