ADVERTISEMENT

ಬಿಕೋ ಎನ್ನುತ್ತಿದೆ ಶೇಂಗಾ ಮಾರುಕಟ್ಟೆ

ಶಿರಾ: ಮಳೆಯಿಲ್ಲದೆ ಇಳುವರಿ ತೀವ್ರ ಕುಸಿತ– ತಾಲ್ಲೂಕಿನ ಆರ್ಥಿಕ ಚಟುವಟಿಕೆಗಳ ಮೇಲೂ ಪ್ರಭಾವ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 5:56 IST
Last Updated 10 ಡಿಸೆಂಬರ್ 2025, 5:56 IST
ಶಿರಾದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂತೆಯ ದಿನವಾದ ಮಂಗಳವಾರ ಅಲ್ಪ ಪ್ರಮಾಣದಲ್ಲಿ ಬಂದಿರುವ ಶೇಂಗಾ
ಶಿರಾದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂತೆಯ ದಿನವಾದ ಮಂಗಳವಾರ ಅಲ್ಪ ಪ್ರಮಾಣದಲ್ಲಿ ಬಂದಿರುವ ಶೇಂಗಾ   

ಶಿರಾ: ಸುಗ್ಗಿ ಸಮಯದಲ್ಲಿ ಶೇಂಗಾದಿಂದ ತುಂಬಿ ತುಳುಕುತ್ತಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಈ ಬಾರಿ ಶೇಂಗಾ ಇಲ್ಲದೆ ಕಳೆಗುಂದಿ ಬಿಕೋ ಎನ್ನುತ್ತಿದೆ.

ಮಾರುಕಟ್ಟೆಯ ಯಾವುದೇ ಮೂಲೆ ನೋಡಿದರೂ ಶೇಂಗಾ ಕಾಣುತ್ತಿತ್ತು. ಅದರೆ ಈ ಬಾರಿ ಮಳೆಯಿಲ್ಲದೆ ಶೇಂಗಾ ಇಳುವರಿ ಕುಂಠಿತವಾಗಿದ್ದು ಮಾರುಕಟ್ಟೆಯಲ್ಲಿ ಶೇಂಗಾಕ್ಕೆ ಹುಡುಕುವಂತಾಗಿದೆ.

ಹಿರಿಯೂರು, ಪಾವಗಡ, ಮಡಕಶಿರಾ, ಮಧುಗಿರಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯ ರೈತರು ಶೇಂಗಾವನ್ನು ಶಿರಾ ಮಾರುಕಟ್ಟೆಗೆ ತರುತ್ತಿದ್ದರು. ದಾವಣಗೆರೆ, ಹಿರಿಯೂರು, ಚಳ್ಳಕೆರೆ ಸೇರಿದಂತೆ ಅಂಧ್ರಪ್ರದೇಶದಿಂದ ವರ್ತಕರು ಶೇಂಗಾ ಖರೀದಿಗೆ ಬರುತ್ತಿದ್ದರು. ರಾಜ್ಯದಲ್ಲಿ ಪ್ರಮುಖ ಶೇಂಗಾ ಮಾರುಕಟ್ಟೆಗಳಲ್ಲಿ ಶಿರಾ ಒಂದಾಗಿತ್ತು.

ADVERTISEMENT

ಶೇಂಗಾನಾಡು ಎಂದು ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖ ಬೆಳೆ. ಈ ಬಾರಿ ಬೆಳೆ ವಿಫಲಗೊಂಡು ರೈತರ ಬದುಕು ಸಂಕಷ್ಟಕ್ಕೀಡಾಗಿದೆ. ತಾಲ್ಲೂಕಿನ ರೈತರ ಆರ್ಥಿಕ ಸ್ಥಿತಿ ಬಹುತೇಕ ಶೇಂಗಾ ಬೆಳೆಯನ್ನೇ ಅವಲಂಬಿಸಿದೆ. ಆದರೆ ಬೆಳೆ ಸತತ ವಿಫಲವಾಗುತ್ತಿರುವ ಕಾರಣ ರೈತರಲ್ಲಿ ಮುಂದಿನ ಬದುಕು ಕಟ್ಟಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಮೂಡುವಂತಾಗಿದೆ.

ರೈತರಿಗೆ ಅನುಕೂಲವಾಗುವಂತೆ ಹಿಂದೆ ವಾರದ ಎರಡು ದಿನ ಶೇಂಗಾ ಮಾರುಕಟ್ಟೆ ನಡೆಸಲಾಗುತ್ತಿತ್ತು. ಆದರೆ ಈಗ ತಿಂಗಳಿಗೆ ಬರುವಷ್ಟು ಶೇಂಗಾ, ಹಿಂದೆ ಒಂದೇ ದಿನ ಮಾರುಕಟ್ಟೆಗೆ ಬರುತ್ತಿತ್ತು.

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ 344 ಕ್ವಿಂಟಲ್, ಅಕ್ಟೋಬರ್‌ನಲ್ಲಿ 5,180 ಕ್ವಿಂಟಲ್, ನವಂಬರ್‌– 4,426 ಕ್ವಿಂಟಲ್ ಸೇರಿದಂತೆ ಮೂರು ತಿಂಗಳಲ್ಲಿ ಒಟ್ಟು 9,951 ಕ್ವಿಂಟಲ್ ಶೇಂಗಾ ಮಾರುಕಟ್ಟೆಗೆ ಬಂದಿತ್ತು. ಆದರೆ ಈ ಬಾರಿ ಸೆಪ್ಟೆಂಬರ್‌ನಲ್ಲಿ 292 ಕ್ವಿಂಟಲ್, ಅಕ್ಟೋಬರ್‌ನಲ್ಲಿ 2,975 ಕ್ವಿಂಟಲ್, ನವೆಂಬರ್‌ನಲ್ಲಿ 884 ಕ್ವಿಂಟಲ್ ಸೇರಿದಂತೆ ಮೂರು ತಿಂಗಳಲ್ಲಿ 4,252 ಕ್ವಿಂಟಲ್ ಮಾರುಕಟ್ಟೆಗೆ ಬಂದಿದ್ದು, ಕಳೆದ ವರ್ಷದ ಅರ್ಧದಷ್ಟು ಸಹ ಈ ಬಾರಿ ಮಾರುಕಟ್ಟೆಗೆ ಶೇಂಗಾ ಬಂದಿಲ್ಲ. ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಗೆ ಬರುತ್ತಿದ್ದ ಶೇಂಗಾ ಕಡಿಮೆಯಾಗುತ್ತಿದ್ದು ಮಾರುಕಟ್ಟೆ ಗತಕಾಲದ ವೈಭವ ಕಳೆದುಕೊಳ್ಳುತ್ತಿದೆ.

ಮಾರುಕಟ್ಟೆಗೆ ಈಗ ಪ್ರತಿವಾರ 50ರಿಂದ 100 ಚೀಲ ಶೇಂಗಾ ಬರುತ್ತಿದ್ದು ಅದನ್ನು ಖರೀದಿ ಮಾಡಿಕೊಂಡು ಮನೆಗೆ ಹೋಗುತ್ತಿದ್ದಾರೆ. ಬೆಳಿಗ್ಗೆ 10 ಗಂಟೆ ನಂತರ ಮಾರುಕಟ್ಟೆಗೆ ಹೋದರೆ ನೋಡಲು ಸಹ ಶೇಂಗಾ ಸಿಗುತ್ತಿಲ್ಲ.

ಕುರಿಗಾಹಿಗಳು ಮೆಕ್ಕೆ‌ ಜೋಳ ಖರೀದಿ ಮಾಡುವುದನ್ನು ಬಿಟ್ಟರೆ ಬೇರೆ ಉತ್ಪನ್ನಗಳಿಗಾಗಿ ಸಂತೆಗೆ ಬಂದವರು ಬರಿಗೈಯಲ್ಲಿ ವಾಪಸ್‌ ಹೋಗುವಂತಾಗಿದೆ.

ಶಿರಾ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂತೆಯ ದಿನವಾದ ಮಂಗಳವಾರ ದವಸ ಧಾನ್ಯಗಳು ಬರದೆ ಬಿಕೊ ಎನ್ನುತ್ತಿತ್ತು

ಸಂತೆ ದಿನವೂ ಖಾಲಿ– ಖಾಲಿ

ಶೇಂಗಾ ಜೊತೆಗೆ ರಾಗಿ ಭತ್ತ ಸೂರ್ಯಕಾಂತಿ ಅಲಸಂದೆ ಅವರೆ ಹುರುಳಿ ಮೊದಲಾದ ಪದಾರ್ಥಗಳು ಆವಕ ಸಹ ಕುಸಿದಿದೆ. ಮೆಕ್ಕೆ‌ಜೋಳ ಹೊರತುಪಡಿಸಿದರೆ ಬೇರೆ ಯಾವುದೇ ಉತ್ಪನ್ನ ಮಾರುಕಟ್ಟೆಗೆ ಬರದ ಕಾರಣ ಸಂತೆ ದಿನ‌ ಸಹ ಮಾರುಕಟ್ಟೆ ಖಾಲಿ‌ ಖಾಲಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.