ಕುಣಿಗಲ್: ಕನ್ನಡ ಸಾಹಿತ್ಯ ಪರಿಷತ್ತಿನ ನಡಿಗೆ ಯುವಜನತೆಯ ಕಡೆಗೆ ಕಾರ್ಯಕ್ರಮ ಸೋಮವಾರ ತಾಲ್ಲೂಕಿನ ಸಂತೇಮಾವತ್ತೂರು ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಪನಿಪಾಳ್ಯ ರಮೇಶ್ ಮಾತನಾಡಿ, ಯುವ ಜನಾಂಗ ತಮ್ಮ ಪೋಷಕರ ಮಾತಿಗೆ ಮಾನ್ಯತೆ ನೀಡುತ್ತಿಲ್ಲ. ಹಲವಾರು ದುಷ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಯುವ ಜನಾಂಗಕ್ಕೆ ತಲುಪಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಅಂತಹ ಕೆಲಸವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.
ಪರಿಷತ್ತಿನ ಕೋಶಾಧ್ಯಕ್ಷ ವಿ.ಎನ್ ರಾಮಣ್ಣ, ದಲಿತ ಕವಿ ಸಿದ್ದಲಿಂಗಯ್ಯ ಅವರ ಸಾಹಿತ್ಯ ಮತ್ತು ಅವರ ಕಾವ್ಯ ರಚನಾ ಶೈಲಿ ಕುರಿತು ವಿವರಿಸಿದರು.
ಜಿ.ಕೆನಾಗಣ್ಣ, ಕನ್ನಡದಲ್ಲಿ ದಲಿತ ಸಾಹಿತ್ಯದ ಹುಟ್ಟು ಮತ್ತು ಬೆಳವಣಿಗೆ ಕುರಿತು ಮಾತನಾಡಿ, ಕನ್ನಡ ಸಾಹಿತ್ಯ ಬಹಳ ಕಾಲದಿಂದಲೂ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪರವಾದ ಅಭಿವ್ಯಕ್ತಿಯನ್ನು ಹೊಂದಿದೆ. ದಲಿತ ಸಾಹಿತ್ಯದ ಹುಟ್ಟಿಗೆ ಕಾರ್ಲ್‌ಮಾಕ್ಸ್, ಅಂಬೇಡ್ಕರ್ ಚಿಂತನೆಯ ಜೊತೆಗೆ ನಮ್ಮದೇ ನೆಲದ ವಚನಸಾಹಿತ್ಯ, ಜಾನಪದ ಸಾಹಿತ್ಯ ಪ್ರೇರಣೆ ನೀಡಿದೆ ಎಂದರು.
ಕಾಲೇಜಿನ ಅಧ್ಯಾಪಕರು ಮತ್ತು ಪ್ರಾಚಾರ್ಯರು ಸೇರಿ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಶಿವಣ್ಣ, ಉಪನ್ಯಾಸಕಿ ಜ್ಯೋತಿ, ಬಸವರಾಜು, ಸೌಮ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.