ADVERTISEMENT

ಯುಗಾದಿ ಹಬ್ಬದ ಸಂತೆ ಜೋರು

ಉಡಿದಾರ ವ್ಯಾಪಾರಿಗಳ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 6:36 IST
Last Updated 13 ಏಪ್ರಿಲ್ 2021, 6:36 IST
ಯುಗಾದಿ ಹಬ್ಬದ ಉಡದಾರದ ವ್ಯಾಪಾರ ಜೋರಾಗಿತ್ತು
ಯುಗಾದಿ ಹಬ್ಬದ ಉಡದಾರದ ವ್ಯಾಪಾರ ಜೋರಾಗಿತ್ತು   

ಹುಳಿಯಾರು: ಹೊಸ ವರ್ಷದ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಯುಗಾದಿ ಹಬ್ಬದ ಸಂತೆ ಸೋಮವಾರ ಪಟ್ಟಣದಲ್ಲಿ ಭರ್ಜರಿಯಾಗಿ ನಡೆಯಿತು.

ಗುರುವಾರ ಸಂತೆ ದಿನವಾದರೂ ಯುಗಾದಿ ಹಬ್ಬದ ಪ್ರಯುಕ್ತ ಸೋಮವಾರ ಸಹ ಸಂತೆ ಸೇರಿತ್ತು. ಹಬ್ಬಕ್ಕೆ ಬಟ್ಟೆ, ಸರಕು ಸೇರಿದಂತೆ ಇತರೇ ಪರಿಕರಗಳನ್ನು ಕೊಳ್ಳಲು ಗ್ರಾಮೀಣ ಭಾಗಗಳಿಂದ ಜನರು ಪಟ್ಟಣಕ್ಕೆ ಆಗಮಿಸಿದ್ದರಿಂದ ಎಲ್ಲೆಲ್ಲೂ ಜನರೇ ತುಂಬಿ ಹೋಗಿದ್ದರು. ಜವಳಿ, ದಿನಸಿ ಹಾಗೂ ರೆಡಿಮೆಡ್ ಬಟ್ಟೆ ಅಂಗಡಿಗಳಲ್ಲಿ ಜನರ ಮಹಾಪೂರವೇ ಕಾಣಿಸುತ್ತಿತ್ತು. ಇನ್ನೂ ತರಕಾರಿ ಸಂತೆಯಲ್ಲಿಯೂ ಜನರು ತುಂಬಿದ್ದರು.

ಸಂತೆಯಲ್ಲಿ ಅಲ್ಲಲ್ಲಿ ರೆಡಿಮೆಡ್ ಅಂಗಡಿಗಳು ಸಹ ತಲೆ ಎತ್ತಿದ್ದವು. ಎಲ್ಲಾ ಕಡೆ ಜನರು ಅಗತ್ಯ ಪರಿಕರ ಕೊಳ್ಳಲು ಮುಗಿಬಿದ್ದಿದ್ದರು. ಬೆಲ್ಲ, ಕಡ್ಲೆ ಸೇರಿದಂತೆ ದಿನಸಿ ಪಾದಾರ್ಥಗಳ ಬೆಲೆ ಗಗನ ಮುಟ್ಟಿದ್ದರೂ ಜನರು ಬರ ಲೆಕ್ಕಿಸದೆ ಅಗತ್ಯಕ್ಕೆ ತಕ್ಕಷ್ಟು ಕೊಂಡುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ADVERTISEMENT

ಹೂವಿನ ಬೆಲೆಯಲ್ಲಿ ಏರಿಕೆಯಾಗಿದ್ದರೆ ಬಾಳೆಹಣ್ಣು ಬೆಲೆಯಲ್ಲಿ ಅಷ್ಟೇನು ಬೆಲೆ ಏರಿಕೆ ಕಂಡುಬರಲಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಬರ ಕಾಡುತ್ತಿದೆ. ನಾವು ಬಿತ್ತಿದ ಬೀಜವೇ ಹಿಂದಿರುಗುತ್ತಿಲ್ಲ. ಆದರೂ ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ಹಬ್ಬದ ಆಚರಣೆ ಮಾಡಲೇ ಬೇಕಾಗಿದೆ ಎಂದು ಸಂತೆಗೆ ಬಂದಿದ್ದ ರೈತರೊಬ್ಬರು ಪ್ರತಿಕ್ರಿಯೆ
ನೀಡಿದರು.

ಯುಗಾದಿ ಉಡಿದಾರ: ಸಾಮಾನ್ಯವಾಗಿ ಯುಗಾದಿ ಹಬ್ಬದಲ್ಲಿ ಉಡಿದಾರ ಧರಿಸುವುದು ವಾಡಿಕೆ. ಅದರಂತೆ ಸಂತೆ ಸೇರಿದಂತೆ ಪಟ್ಟಣ ಜನನಿಬಿಡ ಪ್ರದೇಶಗಳಲ್ಲಿ ಉಡದಾರ ಮಾರುವವರ ಸಂಖ್ಯೆ ಹೆಚ್ಚಿತ್ತು. ಮಾರು ಒಂದಕ್ಕೆ ₹ 5ನಂತೆ ಮಾರಾಟ ಮಾಡುತ್ತಿದ್ದರು. ವರ್ಷದಿಂದ ವರ್ಷಕ್ಕೆ ಉಡಿದಾರ ವ್ಯಾಪಾರ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ವ್ಯಾಪಾರದ ಪೈಪೋಟಿಯಿಂದ ನಿಖರ ಬೆಲೆ ದೊರೆಯುತ್ತಿಲ್ಲ. ಆದರೆ, ಈ ವ್ಯಾಪಾರದಿಂದ ದಿನದ ಕೂಲಿಗೇನು ಮೋಸವಿಲ್ಲ ಎಂದು ಹೊಸದುರ್ಗದ ಶಿವು ಹೇಳಿದರು.

ಮಾಸ್ಕ್‌ ಮಾಯ:ಕೊರೊನಾ ಸಂಕಷ್ಟ ತಂದೊಡ್ಡಿದ್ದು ಪರಿಸ್ಥಿತಿ ಗಂಭೀರವಾಗಿದ್ದರೂ ಜನರು ಮಾಸ್ಕ್‌ ಧರಿಸದೆ ಓಡಾಡುತ್ತಿದ್ದರು. ದಿನಸಿ ಅಂಗಡಿ, ಜವಳಿ ಅಂಗಡಿ, ಗಾರ್ಮೆಂಟ್ಸ್‌ಗಳಲ್ಲಿ ಜನರು ತುಂಬಿಕೊಂಡಿದ್ದರು. ಆದರೆ ಮಾಸ್ಕ್‌ ಧರಿಸದೆ ಬಟ್ಟೆ ಕೊಳ್ಳುತ್ತಿದ್ದರೂ ಅಂಗಡಿ ಮಾಲೀಕರು ಸಹ ಮಾಸ್ಕ್‌ ಬಗ್ಗೆ ಅರಿವು ಮೂಡಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.