ADVERTISEMENT

ಬಿಸಿಲ ಝಳಕ್ಕೆ ಬತ್ತುತ್ತಿವೆ ಜಲಮೂಲ

ಪ್ರಾಣಿ, ಪಕ್ಷಿಗಳಿಗೆ ಗುಟುಕು ನೀರಿಗೂ ಸಂಕಷ್ಟ: ದಿನೇ, ದಿನೇ ಕುಸಿಯುತ್ತಿದೆ ಅಂತರ್ಜಲ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 7:16 IST
Last Updated 22 ಮಾರ್ಚ್ 2024, 7:16 IST
ಸಾವಿರ ಅಡಿ ಕೊರೆದರೂ ಕೊಳವೆ ಬಾವಿಯಲ್ಲಿ ಸಿಗದ ನೀರು
ಸಾವಿರ ಅಡಿ ಕೊರೆದರೂ ಕೊಳವೆ ಬಾವಿಯಲ್ಲಿ ಸಿಗದ ನೀರು   

ಗುಬ್ಬಿ: ತಾಲ್ಲೂಕಿನಲ್ಲಿ ಕಳೆದ ವರ್ಷ ಅತಿವೃಷ್ಟಿಯಾಗಿದ್ದರೆ, ಈ ಬಾರಿ ವಾಡಿಕೆ ಮಳೆಯೂ ಆಗದೆ ಬರಗಾಲ ಎದರಿಸುವಂತಾಗಿದೆ.

ತಾಲ್ಲೂಕಿನ ಬಹುಬಾಗ ಭೂಪ್ರದೇಶ ಕಾವೇರಿ ಜಲಾನಯನ ವ್ಯಾಪ್ತಿಗೆ ಒಳಪಡುತ್ತದೆ. ಮಳೆ ಕೊರತೆಯಿಂದಾಗಿ ಹೇಮಾವತಿ ನಾಲೆಯಲ್ಲಿ ಹರಿದ ನೀರಿನಲ್ಲಿ ತಾಲ್ಲೂಕಿಗೆ ನಿಗದಿಯಾಗಿರುವ ಪಾಲನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ತಾಲ್ಲೂಕಿನಲ್ಲಿ 300ಕ್ಕೂ ಅಧಿಕ ಕೆರೆಗಳಿವೆ. ಬಹುಪಾಲು ಕೆರೆಗಳನ್ನು ಹೇಮಾವತಿ ನೀರಿನಿಂದ ತುಂಬಿಸಿಕೊಳ್ಳಲು ಅವಕಾಶ ಇದ್ದರೂ ಮಳೆಯ ಕೊರತೆಯಿಂದಾಗಿ ಈ ವರ್ಷ ಯಾವುದೇ ಕೆರೆಗಳನ್ನು ತುಂಬಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರಾಣಿ, ಪಕ್ಷಿಗಳಿಗೆ ಗುಟುಕು ನೀರಿಗೂ ಸಂಕಷ್ಟ ಎದುರಾಗಿದೆ.

ADVERTISEMENT

ತಾಲ್ಲೂಕಿನಲ್ಲಿ 25 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದ್ದರೂ, ಇತ್ತೀಚೆಗೆ ಅಡಿಕೆ ಬೆಳೆಯತ್ತ ರೈತರು ಹೆಚ್ಚಿನ ಒಲವು ತೋರುತ್ತಿರುವುದರಿಂದ ನೀರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮಳೆ ಕೊರತೆಯಿಂದಾಗಿ ಕೆರೆಗಳಲ್ಲಿ ನೀರು ಇಲ್ಲವಾಗಿರುವ ಜೊತೆಗೆ ಹೇಮಾವತಿ ನಾಲೆ ನೀರನ್ನು ಪಡೆದಿಲ್ಲದಿರುವುದರಿಂದ ತಾಲ್ಲೂಕಿನಲ್ಲಿ ಸಾವಿರ ಅಡಿಗಳಿಗಿಂತಲೂ ಹೆಚ್ಚು ಕೊರೆದರೂ ನೀರು ಸಿಗದಂತಾಗಿದೆ.

ಕಳೆದ ಒಂದು ತಿಂಗಳಲ್ಲಿಯೇ ತಾಲ್ಲೂಕಿನಲ್ಲಿ 300ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆದಿರುವ ಮಾಹಿತಿ ಇದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆಳದಲ್ಲಿ ನೀರು ದೊರೆತಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗಿ, ಕುಡಿಯಲು ಯೋಗ್ಯ ನೀರು ಪಡೆಯಲು ಕಷ್ಟವಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಜಾನುವಾರಗಳ ಸ್ಥಿತಿ ಮತ್ತಷ್ಟ ಕಷ್ಟಕರವಾಗಲಿದೆ ಎಂದು ರೈತ ಬಸವರಾಜು ಬೇಸರ ವ್ಯಕ್ತಪಡಿಸಿದರು.

ಪಟ್ಟಣಕ್ಕೆ ನೀರು ಪೂರೈಸುವ ಹೇರೂರು ಕೆರೆಗೆ ಹೇಮಾವತಿ ನಾಲೆ ನೀರು ಹರಿಸಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಷ್ಟೊಂದು ತೊಂದರೆ ಆಗುವುದಿಲ್ಲ. ಆದರೆ ಮಳೆ ವಿಳಂಬವಾದಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ.

ಕಳೆದ ವರ್ಷ ತೆರೆದ ಬಾವಿಗಳಲ್ಲಿಯೇ ಸಾಕಷ್ಟು ನೀರು ಇದ್ದು, ಅಂತರ್ಜಲ ಮಟ್ಟ ಸುಧಾರಣೆಯಾಗಿತ್ತು. ಆದರೆ ಈ ಬಾರಿ ಜಲಸಂಕಷ್ಟ  ಎದುರಿಸುವಂತಾಗಿ.

ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ನಂಬಿಕೊಂಡಿದ್ದ ರೈತರಿಗೆ ಎಲ್ಲೂ ಮೇವು ದೊರಕದಂತಾಗಿದೆ. ತೋಟಗಳಲ್ಲಿ ಬೆಳೆದುಕೊಳ್ಳಲು ಕೊಳವೆ ಬಾವಿಗಳ ನೀರು ಸಾಕಾಗುತ್ತಿಲ್ಲ. ಹೈನುಗಾರಿಕೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದ ಹಲವು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೇವು ದೊರಕದ ಕಾರಣ ಅನೇಕ ರೈತರು ರಾಸುಗಳಿಗೆ ಅಡಿಕೆ ಪಟ್ಟೆಯನ್ನೇ ಒಣಗಿಸಿ ಮೇವನ್ನಾಗಿ ಬಳಸುತ್ತಿದ್ದಾರೆ.

ತಾಲ್ಲೂಕಿನ ಅರಣ್ಯ ಪ್ರದೇಶಗಳಲ್ಲಿ ಚಿರತೆ, ತೋಳ, ನರಿ, ಕತ್ತೆ ಕಿರುಬ, ಮೊಲ, ಮುಂಗುಸಿ ಮೊದಲಾದ ಪ್ರಾಣಿಗಳಿದ್ದು, ಕೆರೆಗಳಲ್ಲಿರುವ ನೀರು ಕೆಲವೇ ದಿನಗಳಲ್ಲಿ ಇಲ್ಲವಾಗುವುದರಿಂದ ಪರ್ಯಾಯ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ನೀರು ಅರಸಿ ವಸತಿ ಪ್ರದೇಶಗಳಿಗೂ ನುಗ್ಗುವ ಸಾಧ್ಯತೆ ಇದೆ.

ಜಾನುವಾರುಗಳಿಗೆ ಅಡಿಕೆ ಪಟ್ಟೆಯೇ ಆಹಾರ
ಗುಬ್ಬಿಯಲ್ಲಿ ನೀರು ಇಲ್ಲದೆ ಬಿರುಕು ಬಿಟ್ಟಿರುವ ಬಾವಿ

ಟ್ಯಾಂಕರ್‌ ನೀರು ಪೂರೈಕೆಗೆ ಕ್ರಮ ತಾಲ್ಲೂಕನ್ನು ಸರ್ಕಾರ ಬರಗಾಲ ಪೀಡಿತ ಎಂದು ಘೋಷಿಸಿರುವುದರಿಂದ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಎಂಟು ಗ್ರಾಮಗಳನ್ನು ಜಲ ಸಂಕಷ್ಟ ಗ್ರಾಮಗಳು ಎಂದು ಗುರುತಿಸಿ ವಿಶೇಷ ಆದ್ಯತೆ ಮೇರೆಗೆ ಕೊಳವೆ ಕೊರೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯವಿರುವೆಡೆ ಕುಡಿಯುವ ನೀರನ್ನು ಟ್ಯಾಂಕರ್‌ನಿಂದ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಬರ ನಿರ್ವಹಣೆಗಾಗಿ ನಿರಂತರವಾಗಿ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ತುರ್ತು ಕ್ರಮಕ್ಕಾಗಿ ಅನುದಾನ ಮೀಸಲಿರಿಸಿದ್ದೇವೆ.

ಬಿ. ಆರತಿ, ತಹಶೀಲ್ದಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.