ತುರುವೇಕೆರೆ: ತಾಲ್ಲೂಕಿನ ತಿಗಳ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ₹15 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಭರವಸೆ ನೀಡಿದರು.
ಪಟ್ಟಣದ ತಿಗಳ ಸಮುದಾಯ ಭವನದಲ್ಲಿ ನಡೆದ ಅಗ್ನಿ ಬನ್ನಿರಾಯ ಜಯಂತಿಯಲ್ಲಿ ಮಾತನಾಡಿದರು.
ತಾಲ್ಲೂಕಿನ ಏಕೈಕ ತಿಗಳ ಸಮುದಾಯ ಭವನ ನಿರ್ಮಾಣ ಪೂರ್ಣಗೊಂಡಿಲ್ಲ. ಶ್ರಮ ಜೀವಿಗಳಾಗಿರುವ ತಿಗಳರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಂಡು ಹೆಚ್ಚು ಬೆಳೆ ಬೆಳೆದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.
ತಾಲ್ಲೂಕು ತಿಗಳ ಸಮಾಜದ ಮುಖಂಡ ಜಯಸಿಂಹ ಮಾತನಾಡಿ, ಕಾಯಕದಲ್ಲಿ ಪ್ರಾಮಾಣಿಕತೆ ಹಾಗೂ ಹೋರಾಟ ಮನೋಭಾವದ ಸಂಕೇತ ಹೊಂದಿರುವವರು ತಿಗಳರಾಗಿದ್ದಾರೆ ಎಂದರು.
ತಿಗಳರು ಬೆಂಕಿಗೆ ಸಮಾನ. ಚಾಲುಕ್ಯರು, ಗಂಗರು ಮತ್ತು ಚೋಳರ ಕಾಲದಲ್ಲಿ ಸಾಮ್ರಾಜ್ಯ ಸ್ಥಾಪನೆಯಲ್ಲಿ ತಿಗಳ ಸಮುದಾಯದ ಪಾತ್ರ ಮಹತ್ತರವಾಗಿದೆ. ನಂಬಿಕೆಯ ಉಳಿವಿಗಾಗಿ ತಿಗಳರು ತಮ್ಮ ಪ್ರಾಣವನ್ನೂ ಕೊಡಲು ಹಿಂದೇಟು ಹಾಕುವುದಿಲ್ಲ. ಭೂಮಿಯನ್ನು ಉಳುಮೆ ಮಾಡಿ ಜನರಿಗೆ ಅನ್ನ ನೀಡುತ್ತಿರುವವರಲ್ಲಿ ಬಹುಪಾಲು ಮಂದಿ ತಿಗಳರೂ ಇದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ ನಟೇಶ್, ಸದಸ್ಯರಾದ ಎನ್. ಆರ್.ಸುರೇಶ್, ಚಿದಾನಂದ್, ಪಟ್ಟಣ ಬ್ಯಾಂಕ್ ಅಧ್ಯಕ್ಷ ಎಚ್.ಆರ್. ರಾಮೇಗೌಡ, ಮೆಕಾನಿಕ್ ರಂಗನಾಥ್, ಸಮುದಾಯದ ಮುಖಂಡರಾದ ಯಜಮಾನ್ ಕೃಷ್ಣಪ್ಪ, ಆಣೇಕಾರ್ ಪ್ರಾಣೇಶ್, ಲಕ್ಷ್ಮಿನಾರಾಯಣಪ್ಪ, ಪೈಲ್ವಾನ್ ಕಿಟ್ಟಣ್ಣ, ವೇಣುಗೋಪಾಲ್, ಬ್ಯಾಟರಾಯಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.