ADVERTISEMENT

ಪೊಲೀಸರಿಗೆ ತಲೆನೋವಾದ ಕಳ್ಳ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 13:31 IST
Last Updated 17 ಮಾರ್ಚ್ 2020, 13:31 IST

ಕುಣಿಗಲ್: ತಾಲ್ಲೂಕಿನ ಕುರುಡಿಹಳ್ಳಿಯಲ್ಲಿ ಸೋಮವಾರ ರಾತ್ರಿ ಮನೆಯೊಂದರಕ್ಕೆ ನುಗ್ಗಿದ ಕಳ್ಳನನ್ನು ಗ್ರಾಮಸ್ಥರು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಗ್ರಾಮಸ್ಥರಿಂದ ವಶಕ್ಕೆ ಪಡೆದ ಕಳ್ಳನನ್ನು ರಾತ್ರಿಯಿಂದಲೇ ಸೆಲ್‌ನಲ್ಲಿಟ್ಟಿದ್ದು, ಬೆಳಿಗ್ಗೆ ಕಳ್ಳನ ವರಸೆ ಬದಲಾಗಿದೆ. ಮಾನಸಿಕ ಅಸ್ವಸ್ಥನಂತೆ ವರ್ತಿಸಿರುವ ಕಳ್ಳನನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಗಿದೆ. ಸೆಲ್‌ನಲ್ಲಿರುವ ಶೌಚಾಲಯವನ್ನು ಬಳಸಿದ ನಂತರ ಮೈಮೇಲಿನ ಬಟ್ಟೆಗಳನ್ನು ತೆಗದುಹಾಕಿ ಅರೆ ಹುಚ್ಚನಂತೆ ಅರಚುತ್ತಿದ್ದಾನೆ. ಈತನ ಕುಂಟುಂಬದ ಹಿನ್ನೆಲೆ ಪತ್ತೆಗೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.

ಸಿಬ್ಬಂದಿ ಬಟ್ಟೆಗಳನ್ನು ನೀಡಿದ್ದರೂ ಉಪಯೋಗಿಸದೆ ಬೆತ್ತಲೆಯಲ್ಲಿ ಕುಳಿತು ಅರಚುತ್ತಿದ್ದು, ಈತನ ಬಗ್ಗೆ ಯಾವ ಗ್ರಾಮಸ್ಥನು ದೂರು ನೀಡಿಲ್ಲ. ಚಿಕಿತ್ಸೆಗೂ ಕರೆದುಕೊಂಡು ಹೋಗದ ಸ್ಥಿತಿ ನಿರ್ಮಾಣವಾಗಿದ್ದು, ಅರಚಾಟ ಕೇಳಿ ಬೇಸತ್ತ ಪೊಲೀಸರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ADVERTISEMENT

ಎರಡನೇಪ್ರಕರಣ: ಕಳೆದ ತಿಂಗಳು ಬಾಗೇನಹಳ್ಳಿ ದೇವಾಲಯದ ಕಳವು ಮಾಡಲು ಬಂದ ಕಳ್ಳನನ್ನು ಗ್ರಾಮಸ್ಥರು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದರು. ಗ್ರಾಮಸ್ಥರ ಹೊಡೆತಕ್ಕೆ ಕಳ್ಳನ ಕಾಲು ಮುರಿದಿದ್ದು, ಪೊಲೀಸರು ಸುಮಾರು ಒಂದು ತಿಂಗಳಕಾಲ ಬೆಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿ ಆರೈಕೆ ಮಾಡಿ ನಂತರ ಕಾನೂನಿನ ಪ್ರಕಾರ ಕ್ರಮ ಕೈಗೊಂಡಿದ್ದಾರೆ.

ಈಗ ಮತ್ತೊಂದು ಪ್ರಕರಣ ಬಂದಿದೆ. ಮಾನವೀಯತೆ ದೃಷ್ಟಿಯಿಂದ ಚಿಕಿತ್ಸೆ ನೀಡಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.