
ತುಮಕೂರಿನಲ್ಲಿ ಭಾನುವಾರ ಲೇಖಕ ಎಂ.ಎನ್.ಕೃಷ್ಣಾಚಾರ್ ರಚನೆಯ ‘ತೆಪ್ಪೋತ್ಸವ’ ಕಾದಂಬರಿ ಬಿಡುಗಡೆಗೊಳಿಸಲಾಯಿತು.
ತುಮಕೂರು: ವಾಸ್ತವಕ್ಕೆ ಹತ್ತಿರವಿರುವ ಬರಹ ಓದುಗರನ್ನು ಸೆಳೆದು ಚಿಂತನೆಗೆ ಹಚ್ಚುತ್ತದೆ. ಅಂತಹ ಬರಹ ಹೆಚ್ಚು ಹೊರಬರಲಿ ಎಂದು ವಿಮರ್ಶಕ ರಾಮಲಿಂಗಪ್ಪ ಟಿ.ಬೇಗೂರು ಹೇಳಿದರು.
ನಗರದಲ್ಲಿ ಭಾನುವಾರ ಮೇಘಾ ಎಂಟರ್‌ಪ್ರೈಸೆಸ್ ಪ್ರಕಾಶನ ಸಂಸ್ಥೆಯಿಂದ ಆಯೋಜಿಸಿದ್ದ ಲೇಖಕ ಎಂ.ಎನ್.ಕೃಷ್ಣಾಚಾರ್ ರಚನೆಯ ‘ತೆಪ್ಪೋತ್ಸವ’ ಕಾದಂಬರಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೃಷ್ಣಾಚಾರ್ ಸಾಮಾಜಿಕ ವಾಸ್ತವದ ಜತೆಗೆ ಕಲ್ಪನೆಯನ್ನೂ ಬೆರೆಸಿ ಕಾದಂಬರಿ ರಚಿಸಿದ್ದಾರೆ. ಬದಲಾಗುತ್ತಿರುವ ಸಂಬಂಧ, ಸಾಮಾಜಿಕ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗುರುತಿಸಿ ಬರವಣಿಗೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಸಮಾಜದಲ್ಲಿನ ಇಬ್ಬಂದಿತನ, ಶೋಷಣೆ ರಹಿತ ಮಾದರಿ ಸಮಾಜ ವ್ಯವಸ್ಥೆಯ ಸ್ಥಾಪನೆಯ ಆಶಯವೂ ಎದ್ದು ಕಾಣುತ್ತದೆ ಎಂದರು.
ವಿಮರ್ಶಕ ರವಿಕುಮಾರ್ ನೀಹ, ‘ಕೃಷ್ಣಾಚಾರ್ ತಮ್ಮ ಹೋರಾಟದ ಕಡೆಯಿಂದ ಕೃತಿ ರಚನೆ ಮಾಡಿದಂತಿದ್ದು, ಆತ್ಮಚರಿತ್ರೆಯಂತಿದೆ. ಜೀವನ ಕೂಡಿಸುವ, ತೇಲಿಸುವ ತೆಪ್ಪ ಇಲ್ಲಿ ರೂಪಕವಾಗಿದೆ. ಹಳ್ಳಿಯ ಸಂಬಂಧ ಹೇಳುವ ಓದುಗರ ಕಾದಂಬರಿ’ ಎಂದು ಅಭಿಪ್ರಾಯಪಟ್ಟರು.
ಲೇಖಕಿ ಆಶಾ ಬಗ್ಗನಡು, ‘ಹಿಂದೆ ಹಳ್ಳಿಗಳಲ್ಲಿ ಜಾತ್ಯತೀತ ಸಂಬಂಧವಿತ್ತು. ಇವತ್ತಿನ ರಾಜಕೀಯ ಕುತಂತ್ರದಿಂದ ಹಳ್ಳಿಯ ಸೌಹಾರ್ದ ಸಂಬಂಧ ಹಾಳಾಗುತ್ತಿದೆ. ಈ ಬದಲಾವಣೆಯನ್ನು ಕಾದಂಬರಿಯ ಪಾತ್ರಗಳ ವರ್ತನೆ ಮೂಲಕ ಹೇಳಲಾಗಿದೆ’ ಎಂದು ವಿಶ್ಲೇಷಿಸಿದರು.
ಕಾದಂಬರಿಕಾರ ಎಂ.ಎನ್.ಕೃಷ್ಣಾಚಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ನಿವೃತ್ತ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜು, ನಗರ ಪಾಲಿಕೆಯ ಮುಖ್ಯ ಹಣಕಾಸು ಅಧಿಕಾರಿ ಆರ್.ರೇವಣ್ಣ, ಎಸ್.ವಿ.ಕೆ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎ.ಸತ್ಯನಾರಾಯಣ, ಅಭಯಾಂಜನೇಯಸ್ವಾಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎ.ವೆಂಕಟೇಶ್, ಲೇಖಕರಾದ ಎಂ.ಎಚ್.ನಾಗರಾಜು, ಕೆ.ವಿ.ಕೃಷ್ಣಮೂರ್ತಿ, ಕೆ.ವಿ.ಮುದ್ದುವೀರಪ್ಪ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.