ADVERTISEMENT

ಮಾರ್ಚ್‌ 2ರಂದು ‘ಟಿಪ್ಪು ನಿಜ ಕನಸುಗಳು’ ಪ್ರದರ್ಶನ

ಅಡ್ಡಂಡ ಸಿ.ಕಾರ್ಯಪ್ಪ ರಚನೆ ಮತ್ತು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 16:08 IST
Last Updated 22 ಫೆಬ್ರುವರಿ 2023, 16:08 IST
ಅಡ್ಡಂಡ ಸಿ.ಕಾರ್ಯಪ್ಪ
ಅಡ್ಡಂಡ ಸಿ.ಕಾರ್ಯಪ್ಪ   

ತುಮಕೂರು: ರಂಗಾಯಣದ ವತಿಯಿಂದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚನೆ ಮತ್ತು ನಿರ್ದೇಶನದ ‘ಟಿಪ್ಪು ನಿಜ ಕನಸುಗಳು’ ನಾಟಕವು ಮಾರ್ಚ್‌ 2ರಂದು ಸಂಜೆ 6 ಗಂಟೆಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ.

ಸುಳ್ಳನ್ನು ಸತ್ಯ ಎಂದು ಕೇಳುವುದಕ್ಕೆ ಅಸಹ್ಯವಾಗುತ್ತದೆ. ಟಿಪ್ಪುವಿನ ನಿಜ ಜೀವನದ ಬಗ್ಗೆ ತಿಳಿಸುವ ಉದ್ದೇಶದಿಂದ ನಾಟಕ ರೂಪಿಸಲಾಗಿದೆ. ಇದುವರೆಗೆ 38 ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ನಲವತ್ತು ಸಾವಿರಕ್ಕೂ ಹೆಚ್ಚು ಜನ ನಾಟಕ ನೋಡಿದ್ದಾರೆ ಎಂದು ಅಡ್ಡಂಡ ಕಾರ್ಯಪ್ಪ ಇಲ್ಲಿ ಬುಧವಾರ ಹೇಳಿದರು.

‘ಟಿಪ್ಪು ಕನ್ನಡ ಭಾಷೆ ಕೊಂದವನು. ತಮ್ಮ ಆಳ್ವಿಕೆಯ ಸಮಯದಲ್ಲಿ ರಾಜ್ಯದ ಗ್ರಾಮಗಳಿಗೆ ಪರ್ಷಿಯನ್ ಭಾಷೆಯಲ್ಲಿ ಹೆಸರು ಇಟ್ಟಿದ್ದಾನೆ. ಹಂಪಿ ಮತ್ತು ಆನೆಗೊಂದಿ ಸೇರಿದಂತೆ ಅನೇಕ ಭಾಗಗಳಲ್ಲಿ ದೇವಸ್ಥಾನಗಳಿಗೆ ಹಾನಿ ಮಾಡಿದ್ದಾನೆ. ಮತಾಂತರದ ಮೂಲಕ ಸಾರ್ವಜನಿಕರನ್ನು ಒಕ್ಕಲೆಬ್ಬಿಸಿದ್ದಾನೆ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ADVERTISEMENT

‘ಟಿಪ್ಪು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ಅಡ್ಡಿಪಡಿಸಿ ಮುಖಂಡ ರಫೀ ಉಲ್ಲಾ ನ್ಯಾಯಾಲಯದ ಮೊರೆ ಹೋದರು. ನಂತರ ಅವರೇ ದೂರು ಹಿಂಪಡೆದು ವಾಪಸ್‌ ಓಡಿ ಹೋದರು. ಕನಿಷ್ಠ ವಾದ ಮಾಡಲು ಸಹ ನಿಲ್ಲಲಿಲ್ಲ ಎಂದರು.

ಕೊಡಗು ಜಿಲ್ಲೆಯಲ್ಲಿ ನಾಯಿಗಳಿಗೆ ಟಿಪ್ಪು ಹೆಸರಿನಿಂದ ಕರೆಯುತ್ತಾರೆ. ಟಿಪ್ಪು ಎಂದರೆ ಅಲ್ಲಿನ ಜನರಿಗೆ ಅಷ್ಟು ಕೋಪ. ಕೊಡಗಿನಲ್ಲಿ ನಾನು ಟಿಪ್ಪು ಪರ ಎಂದು ಯಾವುದೇ ನಾಯಕ ಹೇಳಿಕೆ ಕೊಟ್ಟರೂ ಅವರು ಸೋಲುವುದು ಖಚಿತ. ಪ್ರಸ್ತುತ ಎಲ್ಲ ಪಕ್ಷಗಳು ಮತಕ್ಕಾಗಿ ಟಿಪ್ಪುವನ್ನು ಬಳಕೆ ಮಾಡಿಕೊಳ್ಳುತ್ತಿವೆ ಎಂದು ದೂರಿದರು.

ಈ ಹಿಂದೆ ಗಿರೀಶ್‌ ಕಾರ್ನಾಡ್ ‘ಟಿಪ್ಪು ಕಂಡ ಕನಸುಗಳು’ ಪುಸ್ತಕ ಬರೆದರು. ಒಂದು ವರ್ಗವನ್ನು ಓಲೈಸಲು ನಾಟಕ ಪ್ರದರ್ಶನ ಮಾಡಲಾಯಿತು. ವಾಸ್ತವ ಮುಚ್ಚಿಟ್ಟು, ಇಲ್ಲದ್ದನ್ನು ಮುನ್ನೆಲೆಗೆ ತಂದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಟಿಪ್ಪು ಜಯಂತಿ ಆರಂಭ ಮಾಡಿದರು. ಅದು ಕೊಡಗಿನಲ್ಲಿ ಕೋಮು ಸಂಘರ್ಷಗಳಿಗೂ ಕಾರಣವಾಯಿತು ಎಂದು ಹೇಳಿದರು.

ನಾಟಕ ವೀಕ್ಷಣೆಗೆ ₹100 ಟಿಕೆಟ್‌ ನಿಗದಿ ಪಡಿಸಲಾಗಿದೆ. ರಂಗಾಯಣದ ವೆಬ್‌ಸೈಟ್‌ www.rangayana.org ಮೂಲಕ ಟಿಕೆಟ್‌ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಮುಖಂಡರಾದ ಸೊಗಡು ಶಿವಣ್ಣ, ಗಂಗಹನುಮಯ್ಯ, ಎಚ್‌.ಎನ್‌.ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.