
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಪ್ರಮುಖ ಸಂಪರ್ಕ ರಸ್ತೆಯಾದ ತಿಪಟೂರು-ಚಿಕ್ಕನಾಯಕನಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್‌ಗಳು ಸಮಯ ಪಾಲನೆ ಮಾಡದ ಕಾರಣ ನಿತ್ಯ ಸಂಕಷ್ಟ ಎದುರಿಸುವಂತಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಸಕಾಲಕ್ಕೆ ಬಸ್ ಸೌಲಭ್ಯವಿಲ್ಲದೆ ನೂರಾರು ಜನರು ಪರದಾಡುವಂತಾಗಿದೆ. ದೈನಂದಿನ ಕೆಲಸ ಕಾರ್ಯಗಳಿಗೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ತಿಪಟೂರಿಗೆ ತೆರಳುವ ನೂರಾರು ಪ್ರಯಾಣಿಕರು ಸಂಪೂರ್ಣವಾಗಿ ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ಬಸ್‌ಗಳು ನಿಗದಿತ ಸಮಯಕ್ಕೆ ಬಾರದೆ ಇರುವುದು ಹಾಗೂ ಒಮ್ಮೆಲೆ ಎರಡು-ಮೂರು ಬಸ್‌ಗಳು ಬರುತ್ತಿರುವುದು ಪ್ರಯಾಣಿಕರ ಗೊಂದಲಕ್ಕೆ ಕಾರಣವಾಗಿದೆ.
ಗಂಟೆಗಟ್ಟಲೆ ಕಾಯುವ ಜನರು, ಬಸ್ ಬಂದ ತಕ್ಷಣ ಮುಗಿಬಿದ್ದು ಹತ್ತಲು ಮುಂದಾಗುವುದರಿಂದ ಭಾರಿ ನೂಕು-ನುಗ್ಗಲು ಉಂಟಾಗುತ್ತಿದೆ. ಈ ಸಂದರ್ಭದಲ್ಲಿ ತಳ್ಳಾಟದಿಂದಾಗಿ ಕೆಲವರು ಬಿದ್ದು ಗಾಯಗೊಂಡ ನಿದರ್ಶನಗಳಿವೆ. ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಹೈರಾಣಾಗುತ್ತಿದ್ದಾರೆ.
ವಿದ್ಯಾರ್ಥಿಗಳು ಈ ಮಾರ್ಗದ ಅವ್ಯವಸ್ಥೆಯಿಂದ ತೀವ್ರ ಬೇಸತ್ತಿದ್ದಾರೆ. ಬೆಳಿಗ್ಗೆ ತಿಪಟೂರಿಗೆ ತೆರಳಲು ಬಸ್‌ಗಳು ಸಕಾಲಕ್ಕೆ ಲಭ್ಯವಿದ್ದರೂ, ಮಧ್ಯಾಹ್ನದಿಂದ ಸಂಜೆಯವರೆಗೆ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಬರುವ ಬಸ್‌ಗಳು ಸಮಯ ಪಾಲನೆ ಮಾಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ದಣಿದು ತಡವಾಗಿ ಮನೆ ಸೇರುವಂತಾಗಿದೆ.
ಕೇದಿಗೇಹಳ್ಳಿ ನಿಲ್ದಾಣದಲ್ಲಿ ಗೊಂದಲ: ಪುರಸಭೆ ವ್ಯಾಪ್ತಿಯ ಕೇದಿಗೇಹಳ್ಳಿ ವಾರ್ಡ್‌ನಲ್ಲಿ ಬಸ್ ನಿಲುಗಡೆ ವಿಚಾರವಾಗಿ ಪ್ರಯಾಣಿಕರು ಮತ್ತು ಚಾಲಕರ ನಡುವೆ ನಿರಂತರವಾಗಿ ವಾಗ್ವಾದಗಳು ನಡೆಯುತ್ತಿವೆ.
ಸದ್ಯ ಕೇದಿಗೇಹಳ್ಳಿ ಸರ್ಕಾರಿ ಶಾಲೆಯ ಮುಂದೆ ಬಸ್ ನಿಲುಗಡೆಯಾಗುತ್ತಿದೆ. ಆದರೆ, ಹೊಸೂರು ಮತ್ತು ದುಗುಡಿಹಳ್ಳಿಯ ಗಡಿಭಾಗದ ನಿವಾಸಿಗಳಿಗೆ ಅಲ್ಲಿಯವರೆಗೆ ನಡೆದು ಬರುವುದು ಕಷ್ಟಕರವಾಗಿದೆ. ತೋಟದ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಮುಖ್ಯ ರಸ್ತೆಯವರೆಗೆ ನಡೆದು ಬಂದು, ಅಲ್ಲಿಂದ ಮತ್ತೆ 500 ಮೀಟರ್ ದೂರದ ನಿಲ್ದಾಣಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.
ಕೇದಿಗೇಹಳ್ಳಿ ಪುರಸಭೆಗೆ ಸೇರ್ಪಡೆಯಾಗಿದ್ದರೂ ಈ ಭಾಗದಲ್ಲಿ ಬಸ್ ತಂಗುದಾಣವೂ ಇಲ್ಲ. ಹೊಸೂರು ಹಾಗೂ ದುಗುಡಿಹಳ್ಳಿ ಗಡಿಭಾಗದಲ್ಲಿ ಹೆಚ್ಚುವರಿ ಬಸ್ ನಿಲುಗಡೆ ನೀಡಿ, ಸುಸಜ್ಜಿತ ತಂಗುದಾಣ ನಿರ್ಮಿಸಬೇಕು ಎಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ.
ಡಿಪೊದಿಂದ ಹೊರಬರುವುದು ತಡ ಬೆಳಿಗ್ಗೆ ನಿಗದಿತ ಸಮಯಕ್ಕೆ ಬಸ್ ಸಂಚರಿಸಿದರೆ ಅನುಕೂಲವಾಗುತ್ತದೆ. ಡಿಪೊದಿಂದ ಬಸ್‌ಗಳು ತಡವಾಗಿ ಹೊರಬರುತ್ತಿರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ ಎಂದು ಚಾಲಕರು ಮತ್ತು ನಿರ್ವಾಹಕರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಮೂರು ಬಸ್‌ಗಳು ಏಕಕಾಲಕ್ಕೆ ಚಲಿಸುವುದರಿಂದ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.ಮಹಮದ್ ಹುಸೇನ್ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಟ್ರೇಡ್ ಯೂನಿಯನ್ ಜಂಟಿ ಕಾರ್ಯದರ್ಶಿ
ಚ್ಚುವರಿ ನಿಲುಗಡೆಗೆ ಒತ್ತಾಯ ಕೇದಿಗೇಹಳ್ಳಿಯಲ್ಲಿ ಬಸ್ ನಿಲ್ದಾಣ ದೂರವಿರುವುದರಿಂದ ಅಲ್ಲಿಗೆ ತಲುಪಲು ತೊಂದರೆಯಾಗುತ್ತಿದೆ. ಇಲ್ಲಿ ಆಟೊಗಳನ್ನು ನಿಲ್ಲಿಸುವುದಿಲ್ಲ. ಶಕ್ತಿ ಯೋಜನೆ ಜಾರಿಯಾಗುವ ಮೊದಲು ಎರಡು ಕಡೆ ಬಸ್‌ಗಳು ನಿಲುಗಡೆಯಾಗುತ್ತಿದ್ದವು. ಆದರೆ ಈಗ ಕೇವಲ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಮಾತ್ರ ಬಸ್ ನಿಲ್ಲಿಸಲಾಗುತ್ತಿದೆ. ಇದರಿಂದ ಅನಾನುಕೂಲವಾಗುತ್ತಿದ್ದು ಹೆಚ್ಚುವರಿ ನಿಲುಗಡೆಗೆ ಕ್ರಮವಹಿಸಬೇಕು.ಲಕ್ಷ್ಮೀಶ ಕೇದಿಗೆಹಳ್ಳಿ ನಿವಾಸಿ
ಹೆಸಾರಿಗೆ ನಿಯಂತ್ರಕರ ಭರವಸೆ ಸಾರಿಗೆ ಸಮಸ್ಯೆ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಅಪರೂಪಕ್ಕೊಮ್ಮೆ ಇಂತಹ ಸಮಸ್ಯೆಯಾಗುತ್ತಿದ್ದು ಮರುಕಳಿಸದಂತೆ ಎಚ್ಚರವಹಿಸಲಾಗುವುದು ಎಂದು ಸಾರಿಗೆ ನಿಯಂತ್ರಕರು ಭರವಸೆ ನೀಡಿದ್ದಾರೆ.ಸಿ.ಡಿ. ಚಂದ್ರಶೇಖರ್ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.